ಮನೆ ರಾಷ್ಟ್ರೀಯ ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 45 ಮಂದಿ ಕಣ್ಮರೆ, ರಕ್ಷಣಾ ಕಾರ್ಯ ಮುಂದುವರಿಕೆ

ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ: 45 ಮಂದಿ ಕಣ್ಮರೆ, ರಕ್ಷಣಾ ಕಾರ್ಯ ಮುಂದುವರಿಕೆ

0

ಹಿಮಾಚಲಪ್ರದೇಶ: ಹಿಮಾಚಲ ಪ್ರದೇಶದಲ್ಲಿ ಬುಧವಾರ (ಜು.31) ಸಂಭವಿಸಿದ್ದ ಮೇಘಸ್ಫೋಟದಿಂದಾಗಿ ಭಾರೀ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸುಮಾರು 45 ಮಂದಿ ನಾಪತ್ತೆಯಾಗಿದ್ದಾರೆ. ರಾತ್ರಿಯಿಡೀ ಕಾರ್ಯಾಚರಣೆ ನಡೆಸುವ ಮೂಲಕ 29 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಶುಕ್ರವಾರ (ಆ.02) ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಕುಲ್ಲುವಿನ ನಿರ್ಮಂಡ್‌, ಸೈಂಜ್‌ ಮತ್ತು ಮಲಾನಾ ಪ್ರದೇಶಗಳಲ್ಲಿ ಹಾಗೂ ಶಿಮ್ಲಾ ಜಿಲ್ಲೆಯ ಮಾಂಡಿ ಮತ್ತು ರಾಮ್‌ ಪುರ್‌ ನಲ್ಲಿ ಬುಧವಾರ ಮೇಘಸ್ಫೋಟ ಸಂಭವಿಸಿದ್ದು, ಇದರ ಪರಿಣಾಮ ಐವರು ಸಾವನ್ನಪ್ಪಿದ್ದು, 45ಕ್ಕೂ ಅಧಿಕ ಮಂದಿ ನಾಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.

ಕುಲು ಜಿಲ್ಲೆಯ ಮಣಿಕರಣ್‌ ಪ್ರದೇಶದ ಮಲಾನಾ II ವಿದ್ಯುತ್‌ ಯೋಜನೆಯಲ್ಲಿ ಕನಿಷ್ಠ 33 ಮಂದಿ ಸಿಲುಕಿಕೊಂಡಿದ್ದು, ಇದರಲ್ಲಿ 29 ಜನರನ್ನು ರಕ್ಷಿಸುವ ಮೂಲಕ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಧಾರಾಕಾರ ಮಳೆಯಿಂದಾಗಿ ಗೋಡೆ, ಸೇತುವೆಗಳು ಹಾನಿಗೊಂಡಿದ್ದು, ಎಲ್ಲಾ ಅಡೆತಡೆ ನಡುವೆಯೂ ಎನ್‌ ಡಿಆರ್‌ ಎಫ್‌ ತಂಡ 29 ಜನರನ್ನು ರಕ್ಷಿಸಿದ್ದು, ಪವರ್‌ ಹೌಸ್‌ ಒಳಗೆ ಸಿಲುಕಿಕೊಂಡಿರುವ ನಾಲ್ವರನ್ನು ರಕ್ಷಿಸುವ ಕಾರ್ಯ ಮುಂದುವರಿದಿದೆ ಎಂದು ವರದಿ ವಿವರಿಸಿದೆ.

ಮೇಘಸ್ಫೋಟದಿಂದ ಅಪಾಯದಲ್ಲಿ ಸಿಲುಕಿಕೊಂಡವರನ್ನು ಭಾರತೀಯ ಸೇನೆ, ಎನ್‌ ಡಿಆರ್‌ ಎಫ್‌, ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಪೊಲೀಸ್‌, ಹೋಮ್‌ ಗಾರ್ಡ್ಸ್‌ ರಕ್ಷಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.