ಬೆಂಗಳೂರು(Bengaluru): ನಾನು ಸ್ಥಿತ ಪ್ರಜ್ಞನಾಗಿದ್ದೇನೆ. ಸತ್ಯ ನನಗೆ ಗೊತ್ತಿದೆ. ಇದೊಂದು ರಾಜಕೀಯ ಪ್ರೇರಿತ ಎಂದು ನನಗೆ ಗೊತ್ತಿದೆ ಎಂದು ಸಿಎಂ ಬದಲಾವಣೆಗೆ ಚರ್ಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ರೀತಿ ಪ್ರತಿಕ್ರಿಯೆ ನೀಡಿದರು.
ಸಿಎಂ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟ್ವೀಟ್ ಕುರಿತಾಗಿ ಗುರುವಾರ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮೊದಲ ಬಾರಿ ಅಲ್ಲ ಟ್ವೀಟ್ ಮಾಡುವುದು, ಅವರು ಏನೋ ಅಂದುಕೊಂಡಿದ್ದಾರೆ. ಅವರ ಮನಸ್ಸಿನಲ್ಲಿ ಅತಂತ್ರವಿದೆ ಅದನ್ನು ರಾಜ್ಯದ ಜನರ ಮನಸ್ಸಿನಲ್ಲಿ ಹರಡಬೇಕು ಅಂದಕೊಂಡಿದ್ದಾರೆ. ಆದರೆ ಕಾಂಗ್ರೆಸ್ ನೀಡುತ್ತಿರುವ ಈ ರೀತಿಯ ಹೇಳಿಕೆಗಳನ್ನು ಜನರು ನಂಬಲ್ಲ ಎಂದು ಹೇಳಿದರು.
ಈ ರೀತಿಯ ಬೆಳವಣಿಗೆಗಳಿಂದ ನನ್ನ ನಿರ್ಣಯ ಇನ್ನಷ್ಟು ಗಟ್ಟಿಯಾಗುತ್ತದೆ. ಮತ್ತಷ್ಟು ಕೆಲಸ ಮಾಡಲು ಪ್ರೇರಣೆ ನೀಡಿದೆ. ಇನ್ನು ಮುಂದೆ ಎರಡು ತಾಸು ದಿನಕ್ಕೆ ಹೆಚ್ಚು ಕೆಲಸ ಮಾಡುತ್ತೇನೆ. ಪಕ್ಷದ ಬಲವರ್ಧನೆ ಹಾಗೂ ಜನರ ಬಳಿ ಹೋಗುವ ಕೆಲಸ ಮತ್ತಷ್ಟು ಮಾಡುತ್ತೇನೆ ಎಂದು ಹೇಳಿದರು.