ಬೆಂಗಳೂರು: ನಾನು ಶಾಸಕರ ಕೆಲಸ ಕಾರ್ಯಗಳನ್ನು ಮಾಡಿಕೊಡದ ಸಚಿವರ ಬಗ್ಗೆ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇನೆ. ಕುಂಬಳಕಾಯಿ ಕಳ್ಳ ಎಂದರೆ ಇವರೇಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಮ್ಮ ವಿರೋಗಳಿಗೆ ಮತ್ತೆ ಛಾಟಿ ಬೀಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಅನೇಕ ಶಾಸಕರ ಕೆಲಸಕಾರ್ಯಗಳನ್ನು ಕೆಲವು ಸಚಿವರು ಮಾಡಿಕೊಟ್ಟಿಲ್ಲ ಎಂಬುದನ್ನು ಮುಖ್ಯಮಂತ್ರಿ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್‍ಕುಮಾರ್ ಕಟೀಲ್ ಅವರ ಗಮನಕ್ಕೆ ತಂದಿದ್ದೇನೆ. ನಾನು ಯಾರ ಮೇಲೆಯೂ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಎಲ್ಲ ಸಚಿವರ ವಿರುದ್ಧ ದೂರು ಕೊಟ್ಟಿಲ್ಲ. ಕೆಲವು ಸಚಿವರು ನಮ್ಮ ಕ್ಷೇತ್ರಗಳ ಕೆಲಸ ಕಾರ್ಯಗಳನ್ನು ಮಾಡಿಕೊಟ್ಟಿದ್ದಾರೆ. ಅಂಥವರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತದೆ. ನಾನು ಪಕ್ಷದ ವಿರುದ್ದವಾಗಲಿ ಸಂಘಟನೆ ವಿರುದ್ಧ ಮಾತನಾಡಿಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಶಾಸಕರ ಅಭಿಪ್ರಾಯವನ್ನೇ ಅವರ ಬಳಿ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದರು.
ಯಾವ ಸಚಿವರು ಸ್ಪಂದಿಸಿಲ್ಲವೋ, ದೂರವಾಣಿ ಕರೆಗಳನ್ನು ಸ್ವೀಕರಿಸಿಲ್ಲವೋ ಅಂಥವರ ಬಗ್ಗೆ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಸಿಎಂ ಹಾಗೂ ರಾಜ್ಯಾಧ್ಯಕ್ಷರಿಗೆ ಹೇಳಿದ್ದೇನೆ.ನಾನೇನು ಯಾರ ಬಗ್ಗೆಯೂ ಲಿಖಿತವಾಗಿ ದೂರು ಕೊಟ್ಟಿಲ್ಲ. ನಮ್ಮ ಪಕ್ಷದ ಪ್ರಮುಖರ ಜೊತೆ ಹೇಳದೆ ವಿರೋಧ ಪಕ್ಷದ ನಾಯಕರ ಬಳಿ ಹೇಳಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಮಾಜಿ ಸಿಎಂ ಯಡಿಯೂರಪ್ಪನವರು ನನ್ನ ಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಅದೇ ರೀತಿ ಈಗಿನ ಸಿಎಂ ಬೊಮ್ಮಾಯಿ ಅವರು ಕೂಡ ಎಲ್ಲ ರೀತಿಯಲ್ಲೂ ಸಹಕರಿಸಿದ್ದಾರೆ. ಅವರ ಬಗ್ಗೆ ನಾನು ಎಂದಿಗೂ ಮಾತನಾಡಿಲ್ಲ. ಪಕ್ಷ ಮತ್ತು ಸಂಘಟನೆ ತಾಯಿ ಸಮಾನ ಎಂದು ಪ್ರಶ್ನಿಸಿದರು.
ಬೆಳಗಾವಿ ಶಾಸಕಾಂಗ ಸಭೆ ಹಾಗೂ ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಾವಯಲ್ಲಿ ಅನೇಕ ಬಾರಿ ಶಾಸಕಾಂಗ ಸಭೆಯಲ್ಲಿ ಶಾಸಕರ ಕೆಲಸಕಾರ್ಯಗಳು ಆಗುತ್ತಿಲ್ಲ ಎಂಬ ನೋವನ್ನು ತೋಡಿಕೊಂಡಿದ್ದರು. ಆಗಲೂ ಕೂಡ ಧ್ವನಿ ಎತ್ತಿದ್ದೆ.ಈಗಲೂ ಕೂಡ ಅದನ್ನೇ ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ನಾನು ಕೆಲವು ಮಾಹಿತಿಯನ್ನು ಹೇಳದಿದ್ದರೆ ಅದು ಆತ್ಮವಂಚನೆಗೆ ಮಾಡಿಕೊಂಡಂತೆ. ದೆಹಲಿಗೆ ಹೋದ ಸಂದರ್ಭದಲ್ಲಿ ಶಾಸಕರ ಕೆಲಸಕಾರ್ಯಗಳನ್ನು ಮಾಡಿಕೊಡದ ಸಚಿವರ ಬಗ್ಗೆ ನೂರಕ್ಕೆ ನೂರರಷ್ಟು ಹೇಳೇತೀರುತ್ತೇನೆ. ಪಕ್ಷದ ವೇದಿಕೆಯಲ್ಲಿ ಹೇಳಲು ನಮಗೇನೂ ಮುಜುಗರವಿಲ್ಲ ಎಂದು ಹೇಳಿದರು.
ವರಿಷ್ಠರನ್ನು ಭೇಟಿಯಾದಾಗಲು ಕೆಲವು ಸಚಿವರ ಕಾರ್ಯ ವೈಖರಿಯನ್ನು ಅವರ ಗಮನಕ್ಕೆ ತರುತ್ತೇನೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದರೆ ಎಲ್ಲ ಸಚಿವರು ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.