ಬೆಂಗಳೂರು: ಆರ್ಥಿಕ ಸಂಕಷ್ಟದ ನಡುವೆಯೇ ರಾಜ್ಯ ಸರ್ಕಾರ ಶುಕ್ರವಾರ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಮೊದಲ ಬಜೆಟ್ ಇದಾಗಿರುವುದರಿಂದ ರಾಜ್ಯದ ಜನತೆ ಭಾರೀ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.
ಮಧ್ಯಾಹ್ನ 12.30ಕ್ಕೆ ಸಿಎಂ ಬೊಮ್ಮಾಯಿಯವರು ಬಜೆಟ್ ಮಂಡಿಸಲಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿಯವರೆಗೂ ಅಧಿಕಾರಿಗಳೊಂದಿಗೆ ಕೊನೆಯ ಕ್ಷಣದ ಕಸರತ್ತು ನಡೆಸಿದ್ದಾರೆ.
2023ರ ಚುನಾವಣೆಯ ದೃಷ್ಟಿಯಿಂದಲೂ ಈ ಬಜೆಟ್ ಕುತೂಹಲ ಮೂಡಿಸಿದ್ದು, ಈ ಬಾರಿ ಸಿಎಂ ಬೊಮ್ಮಾಯಿಯವರು ಚಿಕ್ಕದಾದ, ಚೊಕ್ಕವಾದ ಜನಪರ ಬಜೆಟ್ ನೀಡಲು ಮುಂದಾಗಿದ್ದಾರೆ.
ವಿಧಾನಸಭೆ ಚುನಾವಣೆ ಕೂಡ ಹತ್ತಿರದಲ್ಲೇ ಇದ್ದು, ಮತದಾರರನ್ನು ಸೆಳೆಯರು ಜನಪ್ರಿಯ ಕಾರ್ಯಕ್ರಮ, ಯೋಜನೆಗಳ ಘೋಷಣೆ ಮಾಡುವುದು ಮುಖ್ಯಮಂತ್ರಿಗಳಿಗೆ ಅನಿವಾರ್ಯವಾಗಿದೆ. ಉಳಿದಂತೆ ಸಾಮಾನ್ಯ ಜನರ ಜೇಬಿಗೆ ಪರೋಕ್ಷವಾಗಿ ಕತ್ತರಿ ಹಾಕುವ ಯಾವುದೇ ತೆರಿಗೆಗಳನ್ನು ಹಚ್ಚಿರುವ ಗೋಜಿಗೆ ಹೋಗುವ ಸಂಭವ ಕಡಿಮೆ ಎಂದು ಹೇಳಲಾಗುತ್ತಿದೆ.
ಆದರೆ, ಕೋವಿಡ್ ಕಾಲದಲ್ಲೂ ಸರ್ಕಾರ ಬೊಕ್ಕಸ ತುಂಬಿದ ಅಬಕಾರಿ ವಲಯದ ಮೇಲೆ ತೆರಿಗೆ ಹೆಚ್ಚಳ ಮಾಡುವುದನ್ನು ತಳ್ಳಿ ಹಾಕುವಂತಿಲ್ಲ. ತಮ್ಮ ಬಜೆಟ್‌ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಕೃಷಿ, ರೈತರ ಕಲ್ಯಾಣ ಮತ್ತು ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸುವ ಸಾಧ್ಯತೆ ಇದೆ.