ಮನೆ ರಾಜ್ಯ ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲಿಗೆ ಲಿಡ್ಕರ್ ಬ್ಯಾಗ್ ಬಳಸಿದ ಸಿಎಂ ಸಿದ್ದರಾಮಯ್ಯ

ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲಿಗೆ ಲಿಡ್ಕರ್ ಬ್ಯಾಗ್ ಬಳಸಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು: ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸೂಟ್‌ ಕೇಸ್‌ ಬಿಟ್ಟು ಲಿಡ್ಕರ್ ಸಂಸ್ಥೆಯ ಲೆದರ್‌ ಬ್ಯಾಗ್‌ ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಸರ್ಕಾರಿ ಸೌಮ್ಯದ ಲಿಡ್ಕರ್ ಕಂಪನಿಯ ಬ್ಯಾಗ್‌ ನಲ್ಲಿ ಬಜೆಟ್ ಪ್ರತಿ ಇರಿಸಲಾಗಿದ್ದು, ಅದನ್ನು ತೆಗೆದುಕೊಂಡು ಸಿದ್ದರಾಮಯ್ಯ ಅವರು ಕಾವೇರಿಯಿಂದ ವಿಧಾನಸೌಧಕ್ಕೆ ತೆರಳಿದರು.

ಸಿದ್ದರಾಮಯ್ಯ ಅವರು ಈವರೆಗೆ ಬರೋಬ್ಬರಿ 14 ಬಜೆಟ್‌ಗಳನ್ನು ಮಂಡನೆ ಮಾಡಿದ ಖ್ಯಾತಿ ಹೊಂದಿದ್ದು, ಯಾವಾಗಲೂ ಬ್ರಿಟೀಷರ ಸಂಪ್ರದಾಯದಂತೆ ಸೂಟ್‌ ಕೇಸ್‌ ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತಂದು ಅದನ್ನು ರಾಜ್ಯದ ಜನತೆಗೆ ತೋರಿಸಿ ಬಜೆಟ್ ಮಂಡನೆ ಮಾಡುತ್ತಿದ್ದರು. ಆದರೆ, ಈ ಬಾರಿ ಮೊದಲ ಬಾರಿಗೆ ತಮ್ಮ ಸಂಪ್ರದಾಯವನ್ನು ಬದಲಿಸಿಕೊಂಡಿದ್ದು, ಈ ಹಿಂದಿನ ಸಂಪ್ರದಾಯದಂತೆ ಸೂಟ್‌ ಕೇಸ್‌ ನಲ್ಲಿ ಬಜೆಟ್ ಪ್ರತಿಗಳನ್ನು ಹೊತ್ತು ತರದೇ ಸರ್ಕಾರಿ ಸ್ವಾಮ್ಯದ ಲಿಡ್ಕರ್ ಸಂಸ್ಥೆಯ ಚರ್ಮದ ಬ್ಯಾಗ್‌ನಲ್ಲಿ ಬಜೆಟ್ ಪ್ರತಿಗಳನ್ನು ತುಂಬಿಕೊಂಡು ಬಂದು ಬಜೆಟ್ ಮಂಡನೆಗೆ ಮುಂದಾಗಿದ್ದಾರೆ.

ಅಂದಹಾಗೆ ಬ್ರಿಟೀಷ್ ಆಡಳಿತದ ಕಾಲದಿಂದಲೂ ಇತ್ತೀಚಿನವರೆಗೆ ಸೂಟ್‌ ಕೇಸ್‌ ನಲ್ಲಿ ಬಜೆಟ್ ಪ್ರತಿಗಳನ್ನು ತಂದು ಬಜೆಟ್ ಮಂಡಿಸುವ ಸಂಪ್ರದಾಯ ಪಾಲನೆ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯ ಸರ್ಕಾರಗಳೂ ಕೂಡ ಇದೇ ಸಂಪ್ರದಾಯ ಅನುಕರಿಸುತ್ತಿದ್ದವು.

ಆದರೆ, ಮೊದಲ ಬಾರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಪ್ರತಿಗಳನ್ನು ತರಲು ಸೂಟ್‌ ಕೇಸ್ ಬದಲಾಗಿ ಬ್ಯಾಗ್ ಬಳಕೆ ಮಾಡಿದ್ದರು. ಆದರೆ, ಈ ಬಾರಿ 2024ನೇ ಸಾಲಿನ ಮಧ್ಯಂತರ ಬಜೆಟ್‌ ಮಂಡನೆಗೆ ಟ್ಯಾಬ್ ಬಳಕೆ ಮಾಡಿದ್ದರು.

ಕರ್ನಾಟಕದಲ್ಲಿ ಬಜೆಟ್ ಪ್ರತಿ ತರಲು ಸೂಟ್ ಕೇಸ್ ಬದಲು ಬ್ಯಾಗ್ ತರುವ ಸಂಪ್ರದಾಯ ಆರಂಭಿಸಿದ್ದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ತಮ್ಮ ಬಜೆಟ್‌ ನಲ್ಲಿ ಲೆದರ್ ಬ್ಯಾಗ್‌ ಅನ್ನು ಬಳಕೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಲಿಡ್ಕರ್ ಸಂಸ್ಥೆಗೆ ನಟ ಡಾಲಿ ಧನಂಜಯ ರಾಯಭಾರಿ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಲಿಡ್ಕರ್ ಸಂಸ್ಥೆಗೆ ಹೆಚ್ಚಿನ ಪ್ರಧಾನ್ಯತೆ ನೀಡಲಾಗಿದ್ದು, ನಟ ರಾಕ್ಷಸ ಖ್ಯಾತಿಯ ಡಾಲಿ ಧನಂಜಯ ಅವರು ಲಿಡ್ಕರ್ ಸಂಸ್ಥೆಗೆ ರಾಯಭಾರಿ ಆಗಿದ್ದಾರೆ.

ಹಿಂದಿನ ಲೇಖನಮದ್ಯಪ್ರಿಯರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ: ಮತ್ತೆ ಮದ್ಯ ಬೆಲೆ ಹೆಚ್ಚಳ
ಮುಂದಿನ ಲೇಖನಕರ್ನಾಟಕ ಬಜೆಟ್: ಯಾವ ಇಲಾಖೆಗೆ ಎಷ್ಟು ಅನುದಾನ? ಮಾಹಿತಿ ಇಲ್ಲಿದೆ