ಮನೆ ಸುದ್ದಿ ಜಾಲ ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ

ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿ ಭೇಟಿ: ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹ

0

ಮೈಸೂರು: ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆಗೆ ಜಿಲ್ಲಾಧಿಕಾರಿಗಳಾದ ಡಾ ಕೆ.ವಿ.ರಾಜೇಂದ್ರ ಅವರು ಭೇಟಿ ನೀಡಿ, ಕೆರೆ ಅಭಿವೃದ್ಧಿ  ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು.

Join Our Whatsapp Group

ಮೈಸೂರಿನ ಹೃದಯ ಭಾಗದಲ್ಲಿರುವ ಕುಕ್ಕರಹಳ್ಳಿ ಕೆರೆ ಅಭಿವೃದ್ಧಿ ಮಾಡುವುದು ಅಗತ್ಯವಾಗಿದೆ. ಕೆರೆಯ ಆವರಣದಲ್ಲಿರುವ ಜಾಗಿಂಗ್‌ ಟ್ರ್ಯಾಕ್‌ ಅಭಿವೃದ್ಧಿಗೆ,  ಕಸ, ಬಲೆ ಹಾಗೂ ತ್ಯಾಜ್ಯ ವಿಲೇವಾರಿ, ವಾಸನೆ ಬರುತ್ತಿರುವ ಭಾಗದಲ್ಲಿ ಹೂಳೆತ್ತುವುದು ಹಾಗೂ ಕೆರೆ ಸ್ವಚ್ಛಗೊಳಿಸಲು, ಬೋಟ್‌ ದುರಸ್ತಿ ಮಾಡಿಸಿ ಅದರ ಚಾಲನೆಗೆ ಹೆಚ್ಚು ಒತ್ತು ಕೊಡಬೇಕು ಎಂದು ಹೇಳಿದರು.

ಸ್ವಚ್ಚತೆಗೆ ಹೆಚ್ಚು ಆದ್ಯತೆ ನೀಡಬೇಕು. ವಾಯು ವಿಹಾರ ಮಾರ್ಗದ ಸೇತುವೆ ಕಬ್ಬಿಣಕ್ಕೆ ಫೇಯಿಂಟ್ ಮಾಡಿಸಬೇಕು. ವಾಯುವಿಹಾರಿಗಳ ಅನುಕೂಲಕ್ಕಾಗಿ ಬೇಕಾಗುವ ಸೌಕರ್ಯಗಳ ಬಗ್ಗೆ ಗಮನಹರಿಸಲಾಗುವುದು ಎಂದು ತಿಳಿಸಿದರು.

ಈ ಸಂಬಂಧ ಕುಕ್ಕರ ಹಳ್ಳಿಕೆರೆ ಅಭಿವೃದ್ದಿಗೆ ಮಾಸ್ಟರ್ ಪ್ಲಾನ್ ಹಾಗೂ ಸೂಕ್ಷ್ಮ ಯೋಜನೆ ತಯಾರಿಸಿ ಮೈಕ್ರೋ ಪ್ಲಾಂಟ್ಸ್ ನಿರ್ವಹಣೆ ಮತ್ತು ಇಂಪ್ರೂವ್ಮೆಂಟ್ ಗೆ  ವಿಶ್ವವಿದ್ಯಾನಿಲಯದಿಂದ ಸಿಎಸ್ ಆರ್ ಅನುದಾನ ಬಳಸಿಕೊಳ್ಳಲು ಕ್ರಮವಹಿಸಲಾಗುವುದು. ಕೆರೆಯ ಅಭಿವೃದ್ಧಿ ಮತ್ತು ಸರಿಯಾದ ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರವೂ ಮುಖ್ಯವಾಗಿದ್ದು ಸಾರ್ವಜನಿಕರು ಕೆರೆಯನ್ನು ಸ್ವಚ್ಛವಾಗಿಡುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.

ಪರಿಸರವಾದಿಗಳಾದ ಪ್ರೊ. ಎಂ ರವಿಕುಮಾರ್ ರವರು ಮಾತನಾಡಿ, ಈ ಕೆರೆಯು ಹಲವಾರು ಜೀವ ವೈವಿಧ್ಯತೆಗಳಿಂದ ಕೂಡಿದ್ದು, ಇಲ್ಲಿನ ಪರಿಸರ ವ್ಯವಸ್ಥೆ ಬಹಳ ಸ್ವಾಭಾವಿಕವಾಗಿ ರೂಪುಗೊಂಡಿದೆ. ಇವುಗಳಿಗೆ ಅಡಚಣೆಯಾಗದಂತೆ ಹಾಗೂ ಸಾರ್ವಜನಿಕರಿಗೂ ಉಪಯುಕ್ತವಾಗುವಂತೆ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ ಎಂದರು.

ಸಾರ್ವಜನಿಕರೊಬ್ಬರು ಮಾತನಾಡಿ ಕುಕ್ಕರಳ್ಳಿ ಕೆರೆಯು ಬಹಳ ವಿಶಾಲವಾಗಿದ್ದು, ಸಾರ್ವಜನಿಕರಿಗೆ ಉತ್ತಮ ಜಾಗಿಂಗ್ ವಾತಾವರಣವನ್ನು ನೀಡಿದೆ. ಆದರೆ ಕೆರೆಯ ನಿರ್ವಹಣೆಯಲ್ಲಿ ಮತ್ತಷ್ಟು ಸುಧಾರಣೆಯಾಗಬೇಕಿದೆ. ನಿಗದಿತ ಸಮಯದ ನಂತರ ಅಂದರೆ ಬೆಳಗ್ಗೆ 9 ಗಂಟೆಯ ನಂತರ ಸಂಜೆ ಐದು ಗಂಟೆಯವರೆಗೆ ನಿಗದಿತ ಶುಲ್ಕದೊಂದಿಗೆ ಕೆರೆ ಬೇಟಿಗೆ ಅವಕಾಶ ನೀಡಬೇಕು ಇದರಿಂದ ಬೆಳಗ್ಗೆ ಮತ್ತು ಸಂಜೆ ವ್ಯಾಯಾಮಕ್ಕಾಗಿ ಬರುವ ಸಾರ್ವಜನಿಕರಿಗೆ ತೊಂದರೆಯಾಗುವುದಿಲ್ಲ ಮತ್ತು ಕೆರೆ ವೀಕ್ಷಣೆ ಮಾಡಲು ಬರುವವರಿಗೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತದೆ ಎಂದು ಅನಿಸಿಕೆ ಹಂಚಿಕೊಂಡರು.

ಈ ವೇಳೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ಲಕ್ಷ್ಮಿಕಾಂತರೆಡ್ಡಿ, ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲೋಕನಾಥ್ ಎನ್ ಕೆ, ಕುಲಸಚಿವರಾದ ಶೈಲಜಾ ಹಾಗೂ ಇತರರು ಹಾಜರಿದ್ದರು.

ಹಿಂದಿನ ಲೇಖನಬಾಲಕಿಗೆ ಅಶ್ಲೀಲ ಚಿತ್ರ ತೋರಿಸಿ ಲೈಂಗಿಕ ದೌರ್ಜನ್ಯ: ಶಿಕ್ಷಕನಿಗೆ 5 ವರ್ಷ ಜೈಲು 1 ಲಕ್ಷ ರೂ. ದಂಡ
ಮುಂದಿನ ಲೇಖನಪ್ರವೀಣ್‌ ನೆಟ್ಟಾರು ಪತ್ನಿ ನೇಮಕಾತಿ ರದ್ದು