ಬಳ್ಳಾರಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತ ಬಳಿಕ ನನ್ನನ್ನು ಅಜ್ಞಾತವಾಸಕ್ಕೆ ಕಳುಹಿಸಿದಂತಾಗಿತ್ತು. ಇದೀಗ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಪುನಃ ನನಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ಅಜ್ಞಾತವಾಸದಿಂದ ಹೊರಬಂದಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 35-40 ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದೇನೆ. ಅದನ್ನು ಪರಿಗಣಿಸಿ ಬಿಜೆಪಿ ವರಿಷ್ಠರು ಲೋಕಸಭೆ ಚುನಾವಣೆಯ ಟಿಕೆಟ್ ನೀಡಿದ್ದಾರೆ. ಇದು ಕಳೆದ ವಿಧಾನಸಭೆ ಚುನಾವಣೆ ಸೋಲಿನ ಅಜ್ಞಾತವಾಸದಿಂದ ಮುಕ್ತವಾದಂತಾಗಿದೆ ಎಂದು ತಿಳಿಸಿದರು.
ನಾನು ಏನೂ ಇಲ್ಲದ ದಿನಗಳಲ್ಲಿ ಮಾಜಿ ಸಂಸದೆ ಬಸವರಾಜೇಶ್ವರಿ ಅವರು ನನ್ನನ್ನು ನಗರಸಭೆ ಸದಸ್ಯರನ್ನಾಗಿ ಮಾಡಿದರು. ಅಂದಿನಿಂದ ಅಜಾತಶತ್ರುವಾಗಿ ಕೆಲಸ ಮಾಡಿದ್ದೇನೆ. ಇದು ಶ್ರೀರಕ್ಷೆಯಾಗಿ ನನ್ನನ್ನು ಕಾಪಾಡಲಿದೆ ಎಂದ ರಾಮುಲು, ಪ್ರಧಾನಿ ನರೇಂದ್ರ ಮೋದಿ ಈ ಬಾರಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಬೇಕು ಎಂದು ಸಂಕಲ್ಪತೊಟ್ಟಿದ್ದಾರೆ. ಕಾಶ್ಮೀರದಲ್ಲಿ 370 ರದ್ದಾದ ಹಿನ್ನೆಲೆಯಲ್ಲಿ ಬಿಜೆಪಿ 370, ಎನ್ ಡಿಎ ಒಕ್ಕೂಟಕ್ಕೆ 400ರ ಗುರಿ ನೀಡಿದ್ದಾರೆ. ಹಾಗಾಗಿ ಇದು ಶ್ರೀರಾಮುಲು ಚುನಾವಣೆಯಲ್ಲ. ಭಾರತ ದೇಶದ ಚುನಾವಣೆ. ದೇಶದ ಪ್ರತಿಯೊಬ್ಬರೂ ನಮ್ಮ ಚುನಾವಣೆ ಎಂದು ಭಾವಿಸಿ ಬಿಜೆಪಿ ಪಕ್ಷಕ್ಕೆ, ಪ್ರಧಾನಿ ನರೇಂದ್ರ ಮೋದಿಗೆ ಮತ ನೀಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.