ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮದ ರೈತರೊಬ್ಬರಿಗೆ ಖಾಸಗಿ ಕಂಪೆನಿ ಕಳಪೆ ಗುಣಮಟ್ಟದ ಮಂಗಳೂರು ಸೌತೆಯ ಬಿತ್ತನೆ ಬೀಜ ನೀಡಿದ ಪರಿಣಾಮ ರೈತರೊಬ್ಬರು ಲಕ್ಷಾಂತರ ರೂ. ನಷ್ಟ ಅನುಭವಿಸಿದ ಘಟನೆ ನಡೆದಿದೆ.
ಹೊನ್ನೂರು ಗ್ರಾಮದ ಎಚ್.ವಿ. ಪ್ರಕಾಶ್, ರಾಜಮ್ಮ ಎಂಬುವರಿಗೆ ಸೇರಿದ ೨೬೭/೫, ೨೬೬/೧, ೨೬೭/೩ ಸರ್ವೇ ನಂ. ೪.೨೫ ಎಕರೆ ಜಮೀನಿನಲ್ಲಿ ಇದನ್ನು ಗುತ್ತಿಗೆ ಪಡೆದಿದ್ದ ಸೋಮಣ್ಣ ಎಂಬುವರು ವಿನ್‌ಸೀಡ್ ಕಂಪೆನಿಯ ಚಾರ್ಲಿ ತಳಿಯ ಮಂಗಳೂರು ಸೌತೆಯ ಬಿತ್ತನೆ ಬೀಜದ ಸಸಿಗಳನ್ನು ಫಾಲಾಕ್ಷ ಎಂಬುವರಿಂದ ಪಡೆದುಕೊಂಡು ಬಿತ್ತನೆ ಮಾಡಿದ್ದರು. ಇದು ೪೫ ದಿನಗಳ ಬೆಳೆಯಾಗಿದೆ. ಮಂಗಳೂರು ಸೌತೆಯಲ್ಲಿ ಹಲವು ತಳಿಗಳಿವೆ. ಆದರೆ ಇವರ ಜಮೀನಿನಲ್ಲಿ ಸೌತೆಯು ಫಲ ಕೊಡಲು ಆರಂಭಗೊಳ್ಳುತ್ತಿದ್ದಂತೆಯೇ ಎಲ್ಲಾ ತಳಿಯ ಕಾಯಿಗಳು ಕಾಣಿಸಿಕೊಂಡಿದೆ. ಅಲ್ಲದೆ ಕಾಯಿಗಳು ಸಣ್ಣದಾಗಿದ್ದು ದಪ್ಪವಾಗುತ್ತಿಲ್ಲ. ಎಕರೆಗೆ ೨೦ ಟನ್ ಬರುತ್ತದೆ ಎಂದು ನೀಡಿದ್ದ ಭರವಸೆ ಹುಸಿಯಾಗಿದೆ. ಈ ವರೆಗೆ ಕೇವಲ ೭.೫ ಟನ್ ಕಾಯಿ ಮಾತ್ರ ಕಟಾವು ಮಾಡಲಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಕಂಪೆನಿಯ ಮೇಲಾಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಕಂಪೆನಿಯ ಫೀಲ್ಡ್‌ಮ್ಯಾನ್ ವಿಕಾಸ್ ಎಂಬುವರನ್ನು ಜಮೀನಿಗೆ ಕಳುಹಿಸಿದ್ದಾರೆ. ಇದೊಂದು ನ್ಯೂಜಿಲ್ಯಾಂಡ್ ಮೂಲದ ಎಮ್‌ಎನ್‌ಸಿ ಕಂಪೆನಿಯಾಗಿದೆ. ಹಾಗಾಗಿ ಕಂಪೆನಿಯ ವಿರುದ್ಧ ನಾವು ದಾವೆಯನ್ನು ಹೂಡಲು ತಯಾರಿ ನಡೆಸಿದ್ದೇವೆ. ಅಲ್ಲಿವರೆಗೆ ಕಂಪೆನಿಯ ಫೀಲ್ಡ್‌ಮ್ಯಾನ್‌ನನ್ನು ಪೊಲೀಸ್ ಕಸ್ಟಡಿಗೆ ನೀಡಲು ತೀರ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಂಪೆನಿ ಸೂಕ್ತ ಸ್ಪಂಧನೆ ಲಭಿಸದಿದ್ದಲ್ಲಿ ಇದರ ವಿರುದ್ಧ ಗ್ರಾಹಕರ ನ್ಯಾಯಾಲಕ್ಕೆ ದೂರು ನೀಡಲಾಗುವುದು ಎಂದು ಮಾಹಿತಿ ನೀಡಿದರು.
ರೈತ ಸಂಘದ ಹೊನ್ನೂರು ಪ್ರಕಾಶ್ ಮಾತನಾಡಿ, ವಿದೇಶಿ ಕಂಪೆನಿಗಳು ಇಂದು ನಮ್ಮನ್ನಾಳುತ್ತಿವೆ. ರೈತರಿಗೆ ಕಳಪೆ ಗುಣಮಟ್ಟದ ಬಿತ್ತನೆ ಬೀಜ ನೀಡಲಾಗಿದೆ. ಒಂದು ಎಕೆರೆ ಸೌತೆ ಬೆಳೆಯಲು ಒಂದು ಲಕ್ಷ ರೂ ಖರ್ಚಾಗುತ್ತದೆ. ಈಗ ಸೋಮಣ್ಣರವರಿಗೆ ನಾಲ್ಕುವರೆಯಿಂದ ಐದು ಲಕ್ಷ ರೂ. ಖರ್ಚಾಗಿದೆ. ಆದರೆ ಫಸಲು ಕೈಗೆ ಬಂದಿಲ್ಲ. ಅಲ್ಲದೆ ಕಂಪೆನಿಯ ಮುಖ್ಯಸ್ಥರನ್ನು ಸಂಪರ್ಕಿಸಲು ಸಾಧ್ಯವೇ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ನಾವು ಮೊದಲಿಗೆ ಕಾನೂನು ಹೋರಾಟ ಮಾಡಲು ತೀರ್ಮಾನಿಸಿದ್ದೇವೆ. ನ್ಯಾಯ ಸಿಗದಿದ್ದರೆ ಇದರ ವಿರುದ್ಧ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗುವುದು. ಅಲ್ಲದೆ ಈ ಬಗ್ಗೆ ತೋಟಗಾರಿಕಾ ಇಲಾಖೆಯವರಿಗೆ ದೂರು ನೀಡಲಾಗಿದೆ ಎಂದರು. ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜು, ಅಧಿಕಾರಿ ಶಿವರಂಜನಿ ಸೇರಿದಂತೆ ಹಲವರು ಇದ್ದರು.














