ಮನೆ ರಾಜ್ಯ ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಜನಮನ್ನಣೆ ಪಡೆಯುವ ದಿಕ್ಸೂಚಿ: ಸಿಎಂ ಬಸವರಾಜ ಬೊಮ್ಮಾಯಿ

ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಜನಮನ್ನಣೆ ಪಡೆಯುವ ದಿಕ್ಸೂಚಿ: ಸಿಎಂ ಬಸವರಾಜ ಬೊಮ್ಮಾಯಿ

0

ಬೆಂಗಳೂರು(Bengaluru): ಪ್ರಮುಖ ನಾಯಕರ ಭಾಜಪ ಪಕ್ಷ ಸೇರ್ಪಡೆಯಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ಜನಮನ್ನಣೆ ಪಡೆಯುವ ದಿಕ್ಸೂಚಿ ನಿಚ್ಚಳವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರಿಂದು ಬಿಜೆಪಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಮಾಜಿ ಸಂಸದರಾದ ಮುದ್ದಹನುಮೇಗೌಡ , ಶಶಿಕುಮಾರ್,ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್ ಸೇರಿದಂತೆ ಅನೇಕ ನಾಯಕರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದರು.

ಭಾರತೀಯ ಜನತಾ ಪಕ್ಷಕ್ಕೆ ನಾಯಕರ ಸೇರ್ಪಡೆ ಕಾರ್ಯಕ್ರಮ ಮುಂದಿನ ರಾಜಕೀಯ ದಿಕ್ಸೂಚಿಯಾಗಿದೆ.ಕರ್ನಾಟಕ ರಾಜಕಾರಣ ಹೊಸ ತಿರುವನ್ನು ಪಡೆಯುತ್ತಿದೆ. ಉತ್ತರಕರ್ನಾಟಕದಲ್ಲಿ ಭಾಜಪ ಸಂಕಲ್ಪಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯಿತು. ಭಾರತೀಯ ಜನತಾ ಪಕ್ಷ ಜನರ ಪರವಾಗಿ ನಿಂತು, ಜನರಿಗೆ ಹತ್ತಿರವಾಗಿ ಕೆಲಸ ಮಾಡಿದೆ. ಜನರ ಉತ್ಸಾಹ ಮತ್ತು ಬೆಂಬಲ ದೊಡ್ಡ ಅಲೆಯಾಗಿ ಪರಿವರ್ತನೆಯಾಗುತ್ತಿದೆ ಎಂದರು.

ಕಾಂಗ್ರೆಸ್ ಪಕ್ಷ ಜನಮತವನ್ನು ಕಳೆದುಕೊಂಡಿದೆ :

ಯಾವ  ವಿಶ್ವಾಸದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿತ್ತೋ, ಆ ವಿಶ್ವಾಸವನ್ನು ಉಳಿಸಿಕೊಳ್ಳಲು ವಿಫಲವಾಗಿ ಅಧಿಕಾರ, ಜನಮತವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ನ 120 ಇದ್ದ ಸ್ಥಾನಗಳು ಈಗ 79 ಸ್ಥಾನಕ್ಕೆ ಇಳಿದಿದೆ. ಸಚಿವಸಂಪುಟದಲ್ಲಿದ್ದ ಬಹುತೇಕ ಎಲ್ಲ ಸಚಿವರು ಸೋತಿದ್ದಾರೆ. ಚುನಾವಣೆಯಲ್ಲಿ ಸೋಲನುಭವಿಸಿ, ಜನಾದೇಶ ಇಲ್ಲದಿದ್ದರೂ ಕೂಡ,  ಅಧಿಕಾರ ಬೇಕೇಬೇಕು ಎಂಬ ದುರಾಸೆಯಿಂದ ಹಿಂಬಾಗಿಲಿನಿಂದ ಬಂದು ಜೆಡಿಎಸ್ ಜೊತೆ ಸೇರಿ ಸರ್ಕಾರ ರಚಿಸಿದರು. ಆ ಪ್ರಯೋಗವೂ ವಿಫಲವಾಯಿತು ಎಂದರು.

ದೇಶದ ಪ್ರಗತಿಗಾಗಿ ಕೆಲಸ ಮಾಡುವ ಭಾಜಪ :

ಇಂದು ಕಾಂಗ್ರೆಸ್ ಪಕ್ಷದಲ್ಲಿರುವ ಹತ್ತು ಹಲವಾರು ನಾಯಕರು, ಬಹಳಷ್ಟು ವರ್ಷಗಳು ಪಕ್ಷಕ್ಕಾಗಿ ದುಡಿದರೂ ಸಹ, ಅವರ ಸೇವೆ ಹಾಗೂ ಸಜ್ಜನಿಕೆಗೆ ಬೆಲೆ ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದು ಸಂಪೂರ್ಣ ಖಾತ್ರಿಯಾದ ನಂತರ ಭಾಜಪ ದಂತಹ ದೇಶಭಕ್ತ, ವಿಶ್ವಮಾನ್ಯ ನಾಯಕ ನರೇಂದ್ರಮೋದಿಯವರ ನೇತೃತ್ವದಲ್ಲಿರುವ ಪಕ್ಷವಾಗಿದ್ದು ,ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ಏಳಿಗೆಗಾಗಿ, ಪ್ರಗತಿಗಾಗಿ ಕೆಲಸ ಮಾಡಲಾಗುತ್ತದೆ ಎಂಬ ವಿಶ್ವಾಸದೊಂದಿಗೆ ಭಾಜಪ ಪಕ್ಷವನ್ನು ನಂಬಿ, ಎಲ್ಲ ಪ್ರಮುಖರು ಇಂದು ಭಾಜಪವನ್ನು ಸೇರಿದ್ದಾರೆ ಎಂದರು.

ಪ್ರಮುಖರ ಪಕ್ಷ ಸೇರ್ಪಡೆಯಿಂದ ಪಕ್ಷಕ್ಕೆ ಬಲ :

ಮುದ್ದಹನುಮೇಗೌಡ ತುಮಕೂರು ಜಿಲ್ಲೆಯ ನಾಯಕರಾಗಿ,ಶಾಸಕರಾಗಿ, ಸಂಸದರಾಗಿ ವಿಧಾನಸಭೆಯಲ್ಲಿ ಹಾಗೂ ಸಂಸತ್ತಿನಲ್ಲಿ ತಮ್ಮದೇ ಆದ ಸ್ಥಾನವನ್ನು ಪಡೆದ ಸಜ್ಜನ ರಾಜಕಾರಣಿ ಮತ್ತು ಜನಪರ ಧ್ವನಿ ಎತ್ತುವ ರಾಜಕಾರಣಿಯಾಗಿ ಸಾರ್ವಜನಿಕ ಜೀವನದಲ್ಲಿರುವವರು ಇಂದು ಭಾಜಪಕ್ಕೆ ಸೇರ್ಪಡೆಯಾಗಿರುವುದು ನಮ್ಮ ಪಕ್ಷಕ್ಕೆ ಬಹಳ ದೊಡ್ಡ ಬಲ ಬಂದಿದೆ ಎಂದರು.

ನಾಯಕರ ಸೇವೆಯನ್ನು ಪಕ್ಷ ಬಯಸುತ್ತದೆ :

ಶಶಿಕುಮಾರ್ ರವರು ಸಂಸದ್ ಸದಸ್ಯರಾಗಿದ್ದು, ಭಾಜಪ ದಲ್ಲಿದ್ದರೇ ಗೌರವ ಎಂದು ಅರಿತು ನಮ್ಮಲ್ಲಿ ಸೇರಿದ್ದಾರೆ. ಖ್ಯಾತ ಚಲನಚಿತ್ರ ನಟರಾಗಿರುವ ಅವರು ರಾಜ್ಯದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದು, ಎಸ್ ಟಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಸೇರ್ಪಡೆಯಿಂದ ಪಕ್ಷಕ್ಕೆ ಶಕ್ತಿ ಬಂದಿದೆ. ಸೇವಾದಳದಲ್ಲಿ ಕಾರ್ಯನಿರ್ವಹಿಸಿದ ಹನುಮಂತರಾವ್ ಅವರು, ಅಂತಹ ಪರಿಶ್ರಮಿಗೂ ಬೇರೆ ಪಕ್ಷದಲ್ಲಿ ಬೆಲೆಯಿಲ್ಲ ಎಂದು ಮನಗಂಡು ಭಾಜಪ ಪಕ್ಷಕ್ಕೆ ಸೇರಿದ್ದಾರೆ. ಅವರ ಸೇವೆಯನ್ನು ಪಕ್ಷ ಬಯಸುತ್ತದೆ ಎಂದರು.

ಮೌಲಿಕ ರಾಜಕಾರಣಕ್ಕೆ ಇಂದು ಬೆಲೆ ದೊರೆತಿದೆ :

ನಿವೃತ್ತ ಐಎಎಸ್ ಅಧಿಕಾರಿಯಾದ ಬಿ.ಹೆಚ್. ಅನಿಲ್ ಕುಮಾರ್ ಅವರು ಸದಾಕಾಲ ಜನಪರ ಕೆಲಸ ಮಾಡಿದ್ದು, ಅವರೊಂದಿಗೆ ಸುಮಾರು 35 ವರ್ಷಗಳ ಬಾಂಧವ್ಯ ಇದೆ. ವಿಶೇಷವಾಗಿ ದೀನದಲಿತರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದಾರೆ. ಅವರು  ಎಸ್ ಸಿ ಸಮುದಾಯಕ್ಕೆ ಸೇರಿದ್ದು,ಮೌಲಿಕ ರಾಜಕಾರಣಕ್ಕೆ ಇಂದು ಬೆಲೆ ದೊರೆತಿದೆ. ರಮೇಶ್ ಮುನಿಯಪ್ಪಯವರು ಆಡಳಿತದಲ್ಲಿ ಅಪಾರವಾದ ಅನುಭವ ಹೊಂದಿದವರು. ದಿಲ್ಲಿಯಲ್ಲಿದ್ದ ಇವರಿಗೆ ರಾಷ್ಟ್ರೀಯ ರಾಜಕಾರಣದ ಬಗ್ಗೆ ಅನುಭವವಿದೆ. ಈ ಎಲ್ಲ ನಾಯಕರನ್ನು ಭಾರತೀಯ ಪಕ್ಷಕ್ಕೆ ತುಂಬು ಹೃದಯದಿಂದ ಸ್ವಾಗತಿಸುತ್ತಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

ಭಾರತೀಯ ಜನತಾ ಪಕ್ಷ ಶಕ್ತಿಯಾಗಿ ಪರಿಣಮಿಸುತ್ತಿದೆ :

ರಾಜಕಾರಣದಲ್ಲಿ ಇಂದು ಸಮೀಕರಣ ಆಗುತ್ತಿದೆ. ಇಂದು ಭಾರತೀಯ ಜನತಾ ಪಕ್ಷ ಶಕ್ತಿಯಾಗಿ ಪರಿಣಮಿಸುತ್ತಿದೆ. ಎಲ್ಲ ವರ್ಗದ ನಾಯಕರು ಪಕ್ಷದಲ್ಲಿ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.. ಪಕ್ಷದಲ್ಲಿ  ಸ್ಥಾನಮಾನಗಳ ಬಗ್ಗೆ ಯಾವುದೇ ವ್ಯಕ್ತಿ ತೀರ್ಮಾನ ಮಾಡದೇ, ಪಕ್ಷ ತೀರ್ಮಾನ ಮಾಡುತ್ತದೆ. ನಮ್ಮದು ರಾಷ್ಟ್ರೀಯ ಪಿಕ್ಷವಾಗಿರುವುದರಿಂದ ,ಚುನಾವಣೆಯ ಸಂದರ್ಭದಲ್ಲಿ  ಸಂಸದೀಯ ಮಂಡಳಿ ಪಕ್ಷದ ಸ್ಥಾನಮಾನಗಳ ಬಗ್ಗೆ ತೀರ್ಮಾನ ಕೈಗೊಳ್ಳುತ್ತದೆ. ಈ ವ್ಯವಸ್ಥೆಗೆ ಎಲ್ಲರೂ ಹೊಂದಿಕೊಳ್ಳಬೇಕು. ಇದೇ ನಮ್ಮ ಪಕ್ಷದ ಶಿಸ್ತು ಮತ್ತು ಸಿದ್ಧಾಂತವಾಗಿದೆ. ಇಂದು ಪಕ್ಷಕ್ಕೆ ಸೇರ್ಪಡೆಗೊಂಡಿರುವ ಎಲ್ಲ ನಾಯಕರನ್ನು ಗೌರವಾದರ , ವಿಶ್ವಾಸಗಳೊಂದಿಗೆ ನಡೆಸಿಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರಾದ ಗೋವಿಂದ ಕಾರಜೋಳ, ಡಾ. ಅಶ್ವತ್ಥ್ ನಾರಾಯಣ, ಎಸ್.ಟಿ‌ ಸೋಮಶೇಖರ್,  ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ,  ಸಿ.ಪಿ ಯೋಗೇಶ್ವರ್ ಮತ್ತಿತರರು ಹಾಜರಿದ್ದರು.