ಬೆಂಗಳೂರು(Bengaluru): ಜು.18ರಂದು ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ರಾಜ್ಯದ ಮುಖ್ಯಮಂತ್ರಿ, ಸಚಿವರು, ಶಾಸಕರು ವಿರುದ‍್ಧ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್‌ನ ರಾಜ್ಯ ಘಟಕ ದೂರು ನೀಡಿದೆ.
ಅಪರಾಧ ಎಸಗಿದವರ ವಿರುದ್ಧ ಸೆಕ್ಷನ್ 171ಬಿ (ಮತ ಪಡೆಯಲು ಆಮಿಷ) 171ಸಿ (ಪ್ರಭಾವ ಬೀರಲು ಯತ್ನ), 171 ಇ (ಮತದಾರರಿಗೆ ಆಮಿಷ), 171ಎಫ್ (ಅನಗತ್ಯವಾಗಿ ಪ್ರಭಾವ) ಪ್ರಕಾರ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಪಕ್ಷದ ಮುಖಂಡ ವಿ.ಎಸ್. ಉಗ್ರಪ್ಪ, ಎಲ್ಲ ಶಾಸಕರನ್ನು ಬಿಜೆಪಿಯವರು ಬೆಂಗಳೂರಿನ ಹೋಟೆಲ್‌ಗೆ ಭಾನುವಾರ ಕರೆಸಿ ಆಹಾರ, ಪಾನೀಯ, ಮನರಂಜನೆ ನೀಡಿದ್ದಾರೆ. ಇದೆಲ್ಲದರ ವೆಚ್ಚವನ್ನು ಮುಖ್ಯಮಂತ್ರಿ ಹಾಗೂ ಬಿಜೆಪಿ ವಹಿಸಿಕೊಂಡಿದ್ದು, ಅವರಿಗೆ ಇದೇ ರೀತಿ ಮತದಾನ ಮಾಡಬೇಕು ಎಂದು ತರಬೇತಿ ನೀಡಲಾಗಿದೆ. ಜೊತೆಗೆ ಅವರನ್ನು ಕರೆದೊಯ್ಯಲು ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಎನ್‌ಡಿಎ ಅಭ್ಯರ್ಥಿ ಸಮ್ಮತಿ ಆಧಾರದ ಮೇಲೆ ಇದನ್ನು ಮಾಡಿದ್ದು, ಈ ವಿಚಾರವಾಗಿ ಪ್ರಕರಣ ದಾಖಲಿಸಬೇಕು. ಹೀಗಾಗಿ, ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ ಎಂದರು.
ರಾಜ್ಯ ವಿಧಾನಸೌಧದಲ್ಲಿ ನಡೆದ ಮತದಾನದಲ್ಲಿ ಎನ್‌ಡಿಎ ಅಭ್ಯರ್ಥಿಗೆ ದಾಖಲಾಗಿರುವ ಎಲ್ಲ ಮತಗಳನ್ನು ಅಸಿಂಧು ಎಂದು ಪರಿಗಣಿಸಬೇಕು ಎಂದ ಅವರು, ಇಲ್ಲಿನ ಸಿಇಒ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನಮ್ಮ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸುವುದಾಗಿ ತಿಳಿಸಿದ್ದಾರೆ ಎಂದರು.