ಮನೆ ರಾಜ್ಯ ದಸರಾ ವೇಳೆಗೆ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿ: ಬೈರತಿ ಬಸವರಾಜ

ದಸರಾ ವೇಳೆಗೆ ಕೈಗೊಂಡಿರುವ ಕಾಮಗಾರಿ ಪೂರ್ಣಗೊಳಿಸಿ: ಬೈರತಿ ಬಸವರಾಜ

0

ಮೈಸೂರು(Mysuru): ದಸರಾ ವೇಳೆಗೆ ಮೈಸೂರು ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಸೂಚಿಸಿದರು.
ಪಾಲಿಕೆಯಲ್ಲಿ ಶುಕ್ರವಾರ ಮೈಸೂರು ಮಹಾನಗರ ಪಾಲಿಕೆ ಹಾಗೂ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಳೆಗಾಲದಲ್ಲಿ ಹಳ್ಳದ ಪ್ರದೇಶಗಳಲ್ಲಿ ನೀರು ನಿಂತು ಜನಜೀವನ ಅಸ್ತವ್ಯಸ್ತಗೊಳ್ಳುವ ಮೊದಲು ಪಾಲಿಕೆ ಎಚ್ಚರವಹಿಸಬೇಕು. ೨೪ ಗಂಟೆ ಸ್ಪಂದಿಸುವ ಟಾಸ್ಕ್‌ಫೋರ್ಸ್ ಸಮಿತಿಯನ್ನು ರಚಿಸಿ ಕೆಲಸ ನಿರ್ವಹಿಸಬೇಕು. ಕಚೇರಿಗಳಲ್ಲಿ ಕೂರದೇ ಸ್ಥಳಕ್ಕೆ ತೆರಳಿ ಸಮಸ್ಯೆಗಳನ್ನು ಬಗೆಹರಿಸಿ ಎಂದು ನಿರ್ದೇಶನ ನೀಡಿದರು.
ನಗರಗಳು ವಿಸ್ತಾರಗೊಳ್ಳುತ್ತಿದ್ದಂತೆ ಹಸಿರು ಕಡಿಮೆಯಾಗುತ್ತದೆ. ಈ ಮಳೆಗಾಲದಲ್ಲೇ ಗಿಡ ನೆಡುವ ಅಭಿಯಾನ ಆರಂಭಿಸಿದರೆ, ಇನ್ನೆರಡು ವರ್ಷದಲ್ಲೇ ಉತ್ತಮ ಫಲ ಸಿಗಲಿದೆ. ಚರಂಡಿ ನೀರನ್ನು ಶುದ್ಧೀಕರಿಸಿ ಅದನ್ನು ಉದ್ಯಾನ ನಿರ್ವಹಣೆಗೆ ಉಪಯೋಗಿಸುವತ್ತ ಯೋಚಿಸಬೇಕು. ಆದಾಯ ಸಂಗ್ರಹಣೆ ಹೆಚ್ಚಳದತ್ತಲು ನಿಗಾವಹಿಸಬೇಕು ಎಂದು ಸಲಹೆ ನೀಡಿದರು.
ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿ, ತೆರಿಗೆ ಸಂಗ್ರಹವು ಕಳೆದ ಬಾರಿ ೧೬೨ ಕೋಟಿಯಿತ್ತು. ಈ ಬಾರಿ ಶೇ ೩೫ ರಷ್ಟು ಹೆಚ್ಚಳ ಕಂಡಿದ್ದು, ಕಳೆದ ಮೂರು ತಿಂಗಳಲ್ಲಿ ೧೦೪ ಕೋಟಿ ಬಂದಿದೆ. ಉದ್ದಿಮೆ ಪರವಾನಗಿಯಿಂದ ಈ ಬಾರಿ ೮ ಕೋಟಿ ಸಂಗ್ರಹಿಸಲಾಗಿದ್ದು, ೧೨ ಕೋಟಿ ಸಂಗ್ರಹದ ಗುರಿಯಿದೆ. ಪಾಲಿಕೆಯ ಆದಾಯ ಸಂಗ್ರಹವು ದ್ವಿಗುಣಗೊಂಡಿದೆ ಎಂದು ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ೫೦ ಸಾವಿರ ಕಂದಾಯ ನಿವೇಶನಗಳಲ್ಲಿ ನಿರ್ಮಿಸಿದ ಮನೆಗಳಿದ್ದು, ಅವುಗಳಿಗೆ ಬಿ ಖಾತಾ ನೀಡಲು ಅನುಮೋದನೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಕುಡಿಯುವ ನೀರಿನ ಶುಲ್ಕ ನೀಡದವರ ಸಂಪರ್ಕ ಕಡಿತಗೊಳಿಸಲಾಗಿದ್ದರಿಂದ ತಿಂಗಳಿಗೆ ೨ ಸಾವಿರ ಹೊಸ ಸಂಪರ್ಕದ ಅರ್ಜಿಗಳು ಬರುತ್ತಿವೆ ಎಂದರು.
ಬಿ ಖಾತಾ ನೀಡಲು ಸರ್ಕಾರ ಈಗಾಗಲೇ ನಿರ್ಣಯ ತೆಗೆದುಕೊಂಡಿದೆ. ಕಾರ್ಯದರ್ಶಿಗಳಿಗೆ ಅಧಿಸೂಚನೆ ಹೊರಡಿಸಲು ಹೇಳಲಾಗಿದೆ. ಈ ನಿರ್ಣಯದಿಂದ ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಾಗಲಿದೆ ಎಂದು ಸಚಿವರು ಹೇಳಿದರು.
ದೇವರಾಜ ಮಾರುಕಟ್ಟೆ ಕಟ್ಟಡವನ್ನು ಹೊಸದಾಗಿ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಬಂದಿದೆ. ರಾಜವಂಶಸ್ಥರನ್ನು ಮನವೊಲಿಸಿಯೇ ಕಾಮಗಾರಿ ಆರಂಭಿಸಲಾಗುವುದು. ನಗರದಲ್ಲಿ ೧೩೦ಕ್ಕೂ ಹೆಚ್ಚು ಅಪಾಯದ ಕಟ್ಟಡಗಳಿದ್ದು, ಅವುಗಳಲ್ಲಿ ಖಾಸಗಿ ಕಟ್ಟಡಗಳೂ ಇವೆ. ಅವಘಡ ಸಂಭವಿಸದಂತೆ ವಹಿಸುವಂತೆ ಪಾಲಿಕೆಗೆ ಸೂಚಿಸಲಾಗಿದೆ ಎಂದು ಸಚಿವ ಬೈರತಿ ಬಸವರಾಜ ಹೇಳಿದರು.
ಪೌರಕಾರ್ಮಿಕರಿಗೆ ಅಗತ್ಯ ಸೌಕರ್ಯ ಒದಗಿಸಿ: ಪೌರಕಾರ್ಮಿಕರ ಎಲ್ಲ ಬೇಡಿಕೆಯನ್ನು ಹಂತ ಹಂತವಾಗಿ ಸರ್ಕಾರ ಈಡೇರಿಸಲಿದೆ. ಎಲ್ಲ ವಾರ್ಡ್‌ಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಕ್ರಮವಹಿಸಬೇಕು. ಕೈಗವಸು ಸೇರಿದಂತೆ ಅಗತ್ಯ ಸುರಕ್ಷತಾ ಪರಿಕರಗಳೊಂದಿಗೆ ಕೆಲಸ ನಿರ್ವಹಿಸುವಂತೆ ನಿಗಾವಹಿಸಬೇಕು. ಸೌಲಭ್ಯಗಳನ್ನು ವಿತರಿಸಬೇಕು ಎಂದು ಸೂಚಿಸಿದರು.
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ ಕಾಮಗಾರಿಗಳನ್ನು ೨೨.೫೪ ಕೋಟಿ ವೆಚ್ಚದಲ್ಲಿ ೧೫೮ ಮನೆಗಳನ್ನು ನೀಡಲು ಯೋಜನೆ ರೂಪಿಸಿ ಆರ್ಥಿಕ ಅನುಮೋದನೆಗೆ ಸಲ್ಲಿಸಲಾಗಿದೆ. ಕಸ ಸಂಗ್ರಹ ಸ್ಥಳಗಳನ್ನು ಸುಂದರಗೊಳಿಸಲು ೩೦ ಲಕ್ಷ ನೀಡಲಾಗಿದೆ. ೨೨ ವಾರ್ಡ್‌ಗಳಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ ಅನುದಾನ ಸಿಕ್ಕಿದ್ದು, ಕಾಮಗಾರಿ ಸದ್ಯದಲ್ಲಿಯೇ ಆರಂಭಿಸಲಾಗುವುದು. ಪೌರಕಾರ್ಮಿಕರು ಆಯ್ಕೆ ಮಾಡಿದ ಸುರಕ್ಷತಾ ಪರಿಕರಗಳನ್ನೇ ಪಾಲಿಕೆ ಒದಗಿಸಿದೆ ಎಂದು ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ ಪ್ರತಿಕ್ರಿಯಿಸಿದರು.