ಮನೆ ಸುದ್ದಿ ಜಾಲ ಮಾದರಿ ನೀತಿ ಸಂಹಿತೆ ಪಾಲನೆ ಕಡ್ಡಾಯ: ಡಾ.ಕೆ.ವಿ.ರಾಜೇಂದ್ರ

ಮಾದರಿ ನೀತಿ ಸಂಹಿತೆ ಪಾಲನೆ ಕಡ್ಡಾಯ: ಡಾ.ಕೆ.ವಿ.ರಾಜೇಂದ್ರ

0

ಮೈಸೂರು: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು, ಪ್ರತಿಯೊಬ್ಬ ರಾಜಕೀಯ ಪ್ರತಿನಿಧಿಗಳು, ಮುಖಂಡರು, ಸಾರ್ವಜನಿಕರು ಮಾದರಿ ನೀತಿ ಸಂಹಿತೆಯನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.

ತಮ್ಮ ಕಛೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣಾ ಮಾದರಿ ನೀತಿ ಸಂಹಿತೆಯು ಇಂದಿನಿಂದ ಮೇ  15 ರವರೆಗೆ ಜಾರಿಯಲ್ಲಿರುತ್ತದೆ. ಮತದಾನವು ಮೇ  10 ರಂದು ನಡೆದು ಮತ ಏಣಿಕೆಯನ್ನು ಮೇ  13 ರಂದು ಮಾಡಲಾಗುವುದು. ಮತದಾರರ ಪಟ್ಟಿಯಲ್ಲಿ ಹೆಸರುಗಳು ಬಿಟ್ಟು ಹೋಗಿದ್ದರೆ ಏಪ್ರಿಲ್ 11 ರ ವರೆಗೆ ಸೇರಿಸಲು ಅವಕಾಶವಿದ್ದು, ಅವಶ್ಯಕ ದಾಖಲೆಗಳನ್ನು ಸಲ್ಲಿಸಿ ಅರ್ಜಿ ನಮೂನೆ 06 ನ್ನು ಭರ್ತಿ ಮಾಡಿ ನೀಡಬಹುದಾಗಿದೆ. ಅಲ್ಲದೆ ವೋಟರ್ ಹೆಲ್ಪ್ ಲೈನ್ ಆಪ್ ಮೂಲಕವು ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರಗಳಿದ್ದು ಪ್ರತಿಯೊಂದು ಕ್ಷೇತ್ರಕ್ಕೂ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ಈಗಾಗಲೇ ನೇಮಿಸಲಾಗಿದೆ. ಜಿಲ್ಲೆಯಾದ್ಯಂತ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಲಾಗಿದೆ. ದಾಖಲೆಯಿಲ್ಲದ 50 ಸಾವಿಕ್ಕಿಂತ ಹೆಚ್ಚಿನ ಹಣವನ್ನು ಸಾಗಿಸುವಂತಿಲ್ಲ. ಚುನಾವಣಾ ಅಕ್ರಮಗಳು ಕಂಡುಬಂದರೆ ಸಿ.ವಿಜಿಲ್ ಆಪ್ ಮೂಲಕ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದೆ. ವೋಟರ್ ಹೆಲ್ಪ್ ಲೈನ್ ಆಪ್ 1950 ಹಾಗೂ 0821-2305656 ಗೆ ಕರೆಮಾಡಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅವಶ್ಯಕ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 2905 ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಿಗೆ ಅಗತ್ಯ ಕನಿಷ್ಠ ಸೌಲಭ್ಯಗಳಾದ ಕುಡಿಯುವ ನೀರು ಶೌಚಾಲಯ, ವಿದ್ಯುತ್ ಸಂಪರ್ಕ, ರ‍್ಯಾಂಪ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 80 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ, ವಿಶೇಷ ಚೇತನ, ಕೋವಿಡ್ ಶಂಕಿತ/ದೃಡಪಟ್ಟ ಮತದಾರರಿಗೆ ಹಾಗೂ ಅಗತ್ಯ ಸೇವೆಗಳ ಇಲಾಖೆಗಳ ನಿರತ ಅಧಿಕಾರಿ/ಸಿಬ್ಬಂದಿಗಳಿಗೆ ಈ ಬಾರಿ ವಿಶೇಷವಾಗಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅಂಚೆ ಮತಪತ್ರಕ್ಕೆ ನಮೂನೆ 12 ಡಿ ರಲ್ಲಿ ಇಂದಿನಿOದ ನಾಮಪತ್ರ ಸಲ್ಲಿಸಲು ಪ್ರಾರಂಭವಾದ ದಿನಾಂಕದಿಂದ 5 ದಿನಗಳೊಳಗಾಗಿ ಸಂಬOಧಪಟ್ಟ ಚುನಾವಣಾಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ ಎಂದರು

ಸಭೆಯಲ್ಲಿ ಮೈಸೂರು ನಗರ ಪೊಲೀಸ್ ಆಯುಕ್ತರಾದ ರಮೇಶ್.ಬಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಗಾಯಿತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಸೀಮಾ ಲಾಟ್ಕರ್, ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜರಾಮ್, ಕಾಂಗ್ರೇಸ್ ಜಿಲ್ಲಾ ಮುಖಂಡರಾದ ಕೆ.ಸಿ.ಶೌಕತ್ ಪಾಷಾ, ಪ್ರಧಾನ ಕಾರ್ಯದರ್ಶಿ, ಉತ್ತನಹಳ್ಳಿ ಶಿವಣ್ಣ, ಜಾತ್ಯಾತೀತ ಜನತಾದಳದ ಮುಖಂಡರಾದ ಎಸ್.ನರಸಿಂಹಸ್ವಾಮಿ, ಹಿರಿಯ ಉಪಾಧ್ಯಕ್ಷರಾದ ಪಾಲ್ಕನ್ ಬೋರೇಗೌಡ, ಬಿಜೆಪಿ ಕಾನೂನು ವಿಭಾಗದ ಗೋಕುಲ್ ಗೋವರ್ದನ್, ನಗರ ಕಾರ್ಯದರ್ಶಿ ಹೆಚ್.ಪಿ.ಚೇತನ್, ಜಿಲ್ಲಾ ಕಾರ್ಯದರ್ಶಿ ಕಿರಣ್ ಜೈರಾಮ್‌ಗೌಡ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.