ಮೈಸೂರು: ಇಂದಿನಿಂದ 2 ದಿನ ಮೈಸೂರು ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಕಿದ್ವಾಯಿ ಆಸ್ಪತ್ರೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿದ ಅವರು, ನಾನು ವೈದ್ಯನಾಗಬೇಕೆಂಬ ಆಸೆ ಇತ್ತು, ಅದರೆ ಮಾರ್ಕ್ಸ್ ಬರಲಿಲ್ಲ. ಆಗ ನನಗೆ ಮೆಡಿಕಲ್ ಸೀಟ್ ಸಿಗದೆ ಇರುವುದೇ ಒಳ್ಳೆಯದಾಯ್ತು. ಈಗ ಸಿಎಂ ಆದೆ ಎಂದು ತಮ್ಮ ಹಿಂದಿನ ಕಾಲದ ನೆನಪು ಮೆಲುಕು ಹಾಕಿದ್ದಾರೆ.
ಬೆಂಗಳೂರು ಬಿಟ್ಟರೆ ವೇಗವಾಗಿ ಬೆಳೆಯುತ್ತಿರುವ ನಗರ ಮೈಸೂರು. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ಕಿದ್ವಾಯಿ ಆಸ್ಪತ್ರೆ ಇದೆ. ಕ್ಯಾನ್ಸರ್ ರೋಗಿಗಳಿಗೆ ಕಡಿಮೆ ಬೆಲೆಯಲ್ಲಿ ಚಿಕಿತ್ಸೆ ಸಿಗಬೇಕು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಹೆಚ್ಚಿನ ಒತ್ತಡವಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕ್ಯಾನ್ಸರ್ ಆಸ್ಪತ್ರೆ ತೆರೆಯಬೇಕು ಎಂದಿದ್ದಾರೆ.
ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತೆ ಅಂತಾ ಕೇಳಿದ್ದೇನೆ. ಈ ರೀತಿಯ ಚಿಕಿತ್ಸೆ ವ್ಯವಸ್ಥೆ ಬೇರೆ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ? ನಾನು ಸಿಎಂ ಆಗುವವರೆಗೂ ಇಲ್ಲಿ ಒಂದು ಜಿಲ್ಲಾ ಆಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಮಾಡಿರಬಹುದು, ಆದರೆ ಹಣ ಕೊಟ್ಟಿಲ್ಲ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನೇ. ವೈದ್ಯರು ಮನುಷ್ಯತ್ವ ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ.
ಮೈಸೂರಿನಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಮಾಡಿಸಿದ್ದು ನಾವು. ಆದರೆ ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆ. ಸುಳ್ಳು ಹೇಳುವವರು ಸಮಾಜಕ್ಕೆ ಅಪಾಯ ಎಂದು ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.