ಮನೆ ಸುದ್ದಿ ಜಾಲ ಜಾರ್ಖಂಡ್‌ನಲ್ಲಿ ರೈಲ್ವೆ ಹಳಿ ಸ್ಫೋಟಿಸಿದ ನಕ್ಸಲರು: 13 ರೈಲುಗಳು ರದ್ದು

ಜಾರ್ಖಂಡ್‌ನಲ್ಲಿ ರೈಲ್ವೆ ಹಳಿ ಸ್ಫೋಟಿಸಿದ ನಕ್ಸಲರು: 13 ರೈಲುಗಳು ರದ್ದು

0

ಚೈಬಾಸಾ: ನಿಷೇಧಿತ ಸಿಪಿಐ(ಮಾವೋವಾದಿ) ಸದಸ್ಯರು ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ರೈಲ್ವೆ ಹಳಿಗಳ ಒಂದು ಭಾಗವನ್ನು ಸ್ಫೋಟಿಸಿದ್ದಾರೆ. ಪರಿಣಾಮ ಹೌರಾ-ಮುಂಬೈ ಮಾರ್ಗದ ಹಲವಾರು ರೈಲುಗಳ ಸೇವೆಯನ್ನು ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ 10:08 ರ ಸುಮಾರಿಗೆ, ಮಹದೇವಸಲ್ ಮತ್ತು ಪೊಸೊಯಿಟಾ ನಿಲ್ದಾಣಗಳ ನಡುವೆ, ಈ  ವಿಭಾಗದ ಮೂರನೇ ಮಾರ್ಗವನ್ನು ಸ್ಫೋಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಘಟನೆಯಿಂದಾಗಿ ಕನಿಷ್ಠ 13 ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಒಂದನ್ನು ಬೇರೆಕಡೆ ತಿರುಗಿಸಲಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 150 ಕಿಮೀ ದೂರದಲ್ಲಿರುವ ಮಹಾದೇವಸಲ್ ಮತ್ತು ಪೊಸೊಯಿಟಾ ನಿಲ್ದಾಣಗಳ ನಡುವೆ ಆಗ್ನೇಯ ರೈಲ್ವೆಯ ಚಕ್ರಧರಪುರ ವಿಭಾಗದಲ್ಲಿ ಗುರುವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ಪಶ್ಚಿಮ ಸಿಂಗ್‌ಭೂಮ್ ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಅವರು ಹೇಳಿದ್ದಾರೆ.

“ಸ್ಥಳದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರೈಲ್ವೆ ಹಳಿಗಳ ದುರಸ್ತಿ ಕಾರ್ಯವನ್ನು ಇಂದು ಬೆಳಗ್ಗೆಯಿಂದಲೇ ಪ್ರಾರಂಭಿಸಲಾಗಿದೆ”. ಮಾವೋವಾದಿಗಳು ಆ ಪ್ರದೇಶದಲ್ಲಿ ಬ್ಯಾನರ್ ಮತ್ತು ಪೋಸ್ಟರ್‌ಗಳನ್ನು ಸಹ ಹಾಕಿದ್ದಾರೆ ಎಂದು ಅವರು ತಿಳಿಸಿದ್ದಾರೆ.

“ಅಪರಿಚಿತ ವ್ಯಕ್ತಿಗಳು ನಡೆಸಿದ ಸ್ಫೋಟದಲ್ಲಿ ಸುಮಾರು ಎರಡರಿಂದ ಮೂರು ಮೀಟರ್‌ಗಳಷ್ಟು ಟ್ರ್ಯಾಕ್‌ಗಳು ಹಾನಿಗೊಳಗಾಗಿವೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ರೈಲುಗಳ ಸಂಚಾರವನ್ನು ನಿಯಂತ್ರಿಸಲಾಗಿದೆ” ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಹಿಂದಿನ ಲೇಖನಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಗೆ ಶಂಕು ಸ್ಥಾಪನೆ: ಸಿಎಂ ಸಿದ್ದರಾಮಯ್ಯ
ಮುಂದಿನ ಲೇಖನಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್: ಮುಖ್ಯ ಶಿಕ್ಷಕಿ ಅರೆಸ್ಟ್