ಮನೆ ಸುದ್ದಿ ಜಾಲ ಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಯಾಗಿರುವ 72 ಯುವ ಸೈನಿಕರಿಗೆ ಅಭಿನಂದನೆ

ಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಯಾಗಿರುವ 72 ಯುವ ಸೈನಿಕರಿಗೆ ಅಭಿನಂದನೆ

0


ಮೈಸೂರು(Mysuru): ಸೈನ್ಯಕ್ಕೆ ಅಗ್ನಿವೀರರಾಗಿ ಆಯ್ಕೆಯಾಗಿರುವ ಯುವಕರು ನಿಸ್ವಾರ್ಥ ಭಾವದಿಂದ ಮತ್ತು ಐಕ್ಯತೆಯಿಂದ ದೇಶ ಕಾಪಾಡುವ ಯೋಧರಾಗಬೇಕು ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಹೇಳಿದರು.

ಬೆಳವಾಡಿಯಲ್ಲಿರುವ ಸೈನಿಕ್ ಅಕಾಡೆಮಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಅಗ್ನಿವೀರರಾಗಿ ಸೈನ್ಯಕ್ಕೆ ಆಯ್ಕೆಯಾಗಿರುವ 72 ಯುವ ಸೈನಿಕರನ್ನು ಅಭಿನಂದಿಸಿ ಅವರು ಮಾತನಾಡಿದರು.

ಸೈನ್ಯಕ್ಕೆ ಯಾವುದೇ ರಾಜಕೀಯ ವ್ಯಕ್ತಿಗಳ ಮಕ್ಕಳಾಗಲಿ, ಐಎಎಸ್, ಐ.ಪಿ.ಎಸ್. ಅಧಿಕಾರಿಗಳ ಮಕ್ಕಳಾಗಲಿ ಹೋಗುವುದಿಲ್ಲ. ರೈತರ ಮಕ್ಕಳು, ಬಡವರ ಮಕ್ಕಳು ಮಾತ್ರ ಸೈನ್ಯಕ್ಕೆ ಸೇರುತ್ತಾರೆ. ಆದ್ದರಿಂದಲೇ ಸೈನಿಕರ ಬ್ಯಾಡ್ಜ್‌ನಲ್ಲಿ ಜೈ ಜವಾನ್, ಜೈ ಕಿಸಾನ್ ಎಂದು ಬರೆದಿರುತ್ತದೆ ಎಂದರು.

ನಾನೂ ಮಾಜಿ ಸೈನಿಕ. ಸೈನ್ಯವು ನನಗೆ ಶಿಸ್ತನ್ನು ಮತ್ತು ಬದುಕನ್ನು ಕಲಿಸಿದೆ. ಸೈನ್ಯಕ್ಕೆ ಸೇರುವ ಯುವಕರು, ಅಲ್ಲಿ ಎಷ್ಟೇ ಕಷ್ಟವಾದರೂ ಬಿಟ್ಟು ಬರಬೇಡಿ. ಯಾರು ಜೀವನದಲ್ಲಿ ಮೊದಲು ಕಷ್ಟಪಡುತ್ತಾರೆಯೋ ಅಂಥವರು ಕೊನೆಯಲ್ಲಿ ಸುಖ ಪಡುತ್ತಾರೆ. ಅದಕ್ಕೆ ನಾನೇ ಸಾಕ್ಷಿಯಾಗಿದ್ದೇನೆ ಎಂದು ತಿಳಿಸಿದರು.

ಅಗ್ನಿವೀರರಾಗಿ ಆಯ್ಕೆಯಾಗಿರುವವರ ಪೋಷಕರು ಪುಣ್ಯವಂತರು. ಸೈನಿಕರಾದವರು ತಂದೆ–ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಸರ್ಕಾರವು ಸೈನಿಕರಿಗೆ ಎಲ್ಲ ರೀತಿಯ ಸವಲತ್ತುಗಳನ್ನೂ ಕೊಡುತ್ತಿದೆ. ಅಲ್ಲಿ ಕೆಲಸ ಮಾಡಿ ಬಂದವರು, ಕೆ.ಎ.ಎಸ್., ಐ.ಎ.ಎಸ್. ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹಾಸನದ ವಿಜಯಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಮಾತನಾಡಿದರು.

ಮುಖಂಡ ಚಂದ್ರಿಕಾ ಸುರೇಶ್, ಸೈನಿಕ್ ಅಮಾಡೆಮಿಯ ಅಧ್ಯಕ್ಷ ಶ್ರೀಧರ್, ಅನಿತಾ ಶ್ರೀಧರ್, ಮಾಜಿ ಯೋಧರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿವಾಕರ್, ವಸಂತ, ಅನಂತಕುಮಾರ್, ಸುದರ್ಶನ್, ಮೊಬೈಲ್ ರಮೇಶ್, ಸಿ.ಐ.ಎಸ್.ಎಫ್.ನ ಎ.ಎಸ್.ಐ. ದಿಡ್ಡಹಳ್ಳಿ ಮಲ್ಲೇಶ್, ವೈ.ಎನ್. ಗಂಗಾ ಇದ್ದರು.ಶ್ವೇತಾ ಸ್ವಾಗತಿಸಿದರು. ರವಿ ಎಸ್.ಎಸ್., ಪ್ರಫುಲ್ಲಾ ನಿರೂಪಿಸಿದರು.

ಹಿಂದಿನ ಲೇಖನಮೈಸೂರು: ರೇಷ್ಮೆ ಮತ್ತು ಉದ್ಯಮ ಕುರಿತು ಅಂತರರಾಷ್ಟ್ರೀಯ ಅಭ್ಯರ್ಥಿಗಳಿಗೆ ತರಬೇತಿ ಕಾರ್ಯಕ್ರಮ
ಮುಂದಿನ ಲೇಖನಎಲ್ಲಿ ನಿನ್ನ ಭಕ್ತರೋ ಅಲ್ಲೇ ಮಂತ್ರಾಲಯ