ಬೆಂಗಳೂರು: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲರಿಗೂ ಆಹ್ವಾನವಿತ್ತು. ಆದರೆ, ಮತ ಬ್ಯಾಂಕ್ ಹೋಗಿ ಬಿಡುತ್ತದೆ ಎಂಬ ಭಯದಿಂದ ಅವರು ಬರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿಯ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಹಾಗೂ ಹಿಂದಿನ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಯುಪಿಎ ಅಧಿಕಾರದಲ್ಲಿದ್ದಾಗ ದೇಶದ ಆರ್ಥಿಕತೆ 11 ನೇ ಸ್ಥಾನದಲ್ಲಿ ಇತ್ತು, ಈಗ 5 ನೇ ಸ್ಥಾನಕ್ಕೆ ಬಂದಿದೆ. ಈಗ ಮತ್ತೆ ಮೋದಿ ಗೆಲ್ಲಿಸಿದರೆ ದೇಶ 3 ನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ಅವರು ಪ್ರತಿಪಾದಿಸಿದರು.
ದೇಶದಲ್ಲಿ ಯುಪಿಎ ಅಧಿಕಾರದಲ್ಲಿದ್ದಾಗ ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋಗುತ್ತಿದ್ದರು. ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಮೌನವಾಗಿ ಇರುತ್ತಿದ್ದರು. ಆಗ ಏನಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರಿಸಲಿ ಎಂದು ಅಮಿತ್ ಶಾ ಸವಾಲು ಹಾಕಿದರು.
ಈಗ ಕಾಶ್ಮೀರದಲ್ಲಿ ಒಂದು ಸಣ್ಣ ಕಲ್ಲು ಸಹ ಬಿಸಾಡುವುದಿಲ್ಲ. ಹತ್ತು ವರ್ಷ ಯುಪಿಎ ಅಧಿಕಾರದಲ್ಲಿದ್ದಾಗ ಏನಾಗುತ್ತಿತ್ತು ಎಂಬುದರ ಬಗ್ಗೆ ಸಿದ್ದರಾಮಯ್ಯ ಉತ್ತರಿಸಲಿ. ಪಾಕಿಸ್ತಾನದಿಂದ ಬಂದು ಬಾಂಬ್ ಹಾಕಿ ಹೋದಾಗ ಮನಮೋಹನ್ ಸಿಂಗ್ ಮೌನವಾಗಿರುತ್ತಿದ್ದರು. ಮೋದಿ ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡಿಸಿದರು. ಇದು ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಗೃಹ ಸಚಿವರು ಹೇಳಿದರು.
ಭ್ರಷ್ಟಾಚಾರ ಮಾಡುವವರು ಜನಸೇವೆ ಮಾಡುವುದಿಲ್ಲ. ಬಡವರಿಗೆ ಹೊಸ ಜೀವನೋತ್ಸಾಹ ತುಂಬಿದವರು ಪ್ರಧಾನಿ ನರೇಂದ್ರ ಮೋದಿ ಎಂದು ಶಾ ಹೇಳಿದರು.
ಮೋದಿ ಸರ್ಕಾರದಲ್ಲಿ ಎಲ್ಲ ವರ್ಗದವರಿಗೂ ಅನುಕೂಲವಾಗಿದೆ. ಹಿಂದಿನ ಪ್ರಣಾಳಿಕೆಯ ಭರವಸೆ ಈಡೇರಿಸಿ ಮತ ಕೇಳಲು ಬಂದಿದ್ದೇವೆ. ಆರ್ಟಿಕಲ್ 370 ರದ್ದಾದರೆ ರಕ್ತ ಹರಿಯಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರೇ, ಇದು ಮೋದಿ ಸರ್ಕಾರ. ಆ ರೀತಿ ಏನೂ ನಡೆಯಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದೇವೆ. ಮತ ಬ್ಯಾಂಕ್ಗಾಗಿ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಜತೆ ಸಭೆ ನಡೆಸಿದ್ದ ಅಮಿತ್ ಶಾ, ಲೋಕಸಭೆ ಚುನಾವಣೆ ಗೆಲ್ಲುವುದಕ್ಕಾಗಿ ಹಲವು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹಿಂದುಳಿದ ವರ್ಗಗಳ ಮತ ಕ್ರೂಡೀಕರಣ ಸೇರಿ ಹಲವು ಸಲಹೆಗಳನ್ನು ಹಾಗೂ ನಿರ್ದೇಶನಗಳನ್ನು ಶಾ ರಾಜ್ಯ ಬಿಜೆಪಿ, ಜೆಡಿಎಸ್ ನಾಯಕರಿಗೆ ನೀಡಿದ್ದಾರೆ.