ವಿಜಯಪುರ : ಒಂದಿಲ್ಲೊಂದು ಕೆಟ್ಟ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಸುದ್ದಿಯಲ್ಲಿದೆ. ಯಾವತ್ತಾದ್ರೂ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದ್ದೀರಾ ಎಂದು ಮಾಜಿ ಸಚಿವ ಸಿಟಿ ರವಿ ಕಿಡಿಕಾರಿದ್ದಾರೆ.
ಉಪಚುನಾವಣೆ ಕಣ ರಣರಂಗೇರಿದೆ. ಈ ಹಿನ್ನೆಲೆ ಮಾಜಿ ಸಚಿವ ಸಿಟಿ ರವಿ, ಶಾಸಕ ಸುನೀಲ್ ಕುಮಾರ್ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಸಿಎಂ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಬಂದು 3 ವರ್ಷ ಆಗಿದೆ. ಒಳ್ಳೆಯ ಕಾರಣಕ್ಕೆ ಒಂದು ದಿನ ಕೂಡ ಸುದ್ದಿಯಲ್ಲಿರಲಿಲ್ಲ.
ಕೇವಲ ಮುಡಾ, ಡ್ರಗ್ಸ್, ವಾಲ್ಮೀಕಿ ಹಗರಣ, ರೈತರ ಆತ್ಮಹತ್ಯೆ, ಸರ್ಕಾರಿ ನೌಕರರ ಆತ್ಮಹತ್ಯೆಯಂತಹ ಕೆಟ್ಟ ಕಾರಣಕ್ಕೆ ಸುದ್ದಿಯಲ್ಲಿದ್ದೀರಿ. ಒಟ್ಟಾರೆಯಾಗಿ ಒಂದಿಲ್ಲೊಂದು ಕೆಟ್ಟ ವಿಚಾರಕ್ಕೆ ಸರ್ಕಾರ ಸುದ್ದಿಯಲ್ಲಿದೆ ಎಂದು ಕಾಲೆಳೆದಿದ್ದಾರೆ.
ಸಿಎಂ ಸೇರಿದಂತೆ ಸಚಿವರು ಕೂಡ ಹೇಳಲಿ ಯಾವುದಾದರೂ ಒಂದು ಒಳ್ಳೆಯ ಕೆಲಸ ಮಾಡಿದ್ದೀರಾ? ಉಪಚುನಾವಣೆ ಬಂತು ಅಂತಾ ಮೆಡಿಕಲ್ ಕಾಲೇಜಿಗೆ ಅಡಿಗಲ್ಲು ಹಾಕಿದ್ದಾರೆ. ಚುನಾವಣೆ ಮುಗಿದ ನಂತರ ಅದನ್ನ ಕಿತ್ತುಕೊಂಡು ಹೋಗ್ತಾರೆ ಎಂದಿದ್ದಾರೆ.
ಯುದ್ಧದ ಕಾರಣದಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಕೆಲ ಬೆಲೆಗಳು ಏರಿಕೆ ಆಗಿದೆ. ಆದ್ರೆ ನೀವು ಏನು ಇಲ್ಲದೇ ಬೆಲೆ ಏರಿಕೆ ಮಾಡಿದ್ದೀರಿ, ಯಾರು ಮಾನಗೆಟ್ಟವರು? ಅಬಕಾರಿ ಸುಂಕ, ಸ್ಟಾಂಪ್ ಪೇಪರ್ ರೆಜಿಸ್ಟ್ರೇಷನ್ ಶುಲ್ಕ ಹೆಚ್ಚಿಸಿದ್ದೀರಿ ಇದೆಲ್ಲವೂ ಹಗಲುದರೋಡೆಗೆ ಸಮಾವಾಗಿದೆ.
ನಮ್ಮನ್ನ ಜೇಬು ಕಳ್ಳರು ಅಂತಾ ಹೇಳೋದಾದ್ರೆ, ನೀವು ಹಗಲುದರೋಡೆ ಕೋರರು. ಡ್ರಗ್ ಪೆಡ್ಲರ್ಗಳು ರಾಜ್ಯದ್ಯಂತ ಹರಡಿದ್ದಾರೆ ಅಂದರೆ ಅದೆಲ್ಲ ನಿಮ್ಮ ಸರ್ಕಾರದ ಕೃಪಾಕಟಾಕ್ಷ. ನಿಮ್ಮ ಆಶೀರ್ವಾದದಿಂದಲೇ ಡ್ರಗ್ಸ್ ವ್ಯವಹಾರ ರಾಜ್ಯದಲ್ಲಿ ನಡೆದಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.













