ಮನೆ ರಾಜಕೀಯ ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ: ಬಿಜೆಪಿ ವ್ಯಂಗ್ಯ ಟೀಕೆ

ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ: ಬಿಜೆಪಿ ವ್ಯಂಗ್ಯ ಟೀಕೆ

0

ಬೆಂಗಳೂರು(Bengaluru): ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡವಾಗಿದೆ ಎಂದು ವ್ಯಾಖ್ಯಾನಿಸಿರುವ ಬಿಜೆಪಿ  ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯ ಕುರಿತು ವ್ಯಂಗ್ಯವಾಡಿದೆ,

ಜಗತ್ತಿನ ಕಣ್ಣಿಗೆ ಮಣ್ಣೆರೆಚಲು ಡಿಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬರುವುದೇನು, ಜೊತೆಯಾಗಿ ಎತ್ತಿನ ಗಾಡಿ ಓಡಿಸುವುದೇನು, ಚಿಂತನ ಶಿಬಿರದಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದೇನು. ಮುಖವಾಡ ಕಳಚುತ್ತಿದೆ, ಸೃಷ್ಟಿಯಾದ ಕಂದಕ ಲೋಕಕ್ಕೆ ಸಾರಿ ಸಾರಿ ಹೇಳುತ್ತಿದೆ, ಇದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಕದನವೆಂದು ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಏಕಾಂಗಿತನ ಕಾಡುತ್ತಿದೆ. ಕಾಂಗ್ರೆಸ್ಸಿನಲ್ಲಿ ಈಗ ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಡಿಕೆಶಿ ಅವರಿಂದ ಸಿಎಂ ಸ್ಥಾನಕ್ಕೆ ಪ್ರಬಲ ಲಾಬಿ ಎದುರಾಗುತ್ತಿದೆ. ಡಿಕೆಶಿ ಹಾಗೂ ಸಿದ್ಧರಾಮಯ್ಯ ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ, ಸಿದ್ದರಾಮಯ್ಯ ವಿರೋಧಿ ಪಾಳಯ ಜಾಗೃತಗೊಂಡಿದೆ  ಎಂದು ಟ್ವೀಟ್ ನಲ್ಲಿ ಹೇಳಲಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಪ್ರಭಾವಲಯವನ್ನು ತಗ್ಗಿಸಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಶಕ್ತಿ ಪ್ರದರ್ಶನ ಸಮಾರಂಭದ ಸಿದ್ಧತೆ ಆರಂಭವಾಗಿದೆ. ಅಭಿಮಾನಿ ಬಳಗದ ಈ ಸಮಾರಂಭ ಯಾರಿಗೆ ಠಕ್ಕರ್‌ ನೀಡಲು ಆಯೋಜಿಸಲಾಗಿದೆ? ಎಂದು ಬಿಜೆಪಿ ಪ್ರಶ್ನಿಸಿದೆ.

ಕೈ ನಾಯಕರು ಪದೇ ಪದೇ ದೆಹಲಿಯ 10 ಜನ್‌ಪಥ್‌ ದರ್ಶನ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕಗ್ಗಂಟನ್ನು ಬಗೆ ಹರಿಸಲಾಗದವರು ರಾಜ್ಯದ ಸಿಎಂ ಕುರ್ಚಿಯ ಕಾದಾಟವನ್ನು ಬಗೆಹರಿಸುವರೇ? ಎಂದು ವ್ಯಂಗ್ಯವಾಗಿ ಟೀಕಿಸಿದೆ.