ಶಿವಮೊಗ್ಗ : ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಅವರು ಇಂದು ಶಿವಮೊಗ್ಗ ನಗರದಲ್ಲಿ ಆಯೋಜಿಸಲಾಗಿದ್ದ ಪ್ರಜಾಧ್ವನಿ-2 ಲೋಕಸಭಾ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವನ್ನು ಖಚಿತಪಡಿಸಿ ಮಾತನಾಡಿದರು.
ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ ರಾಜ್ಯದ ಪರವಾಗಿ, ಜಿಲ್ಲೆಯ ಪರವಾಗಿ ಪಾರ್ಲಿಮೆಂಟಿನಲ್ಲಿ ನೆಪಕ್ಕೂ ಬಾಯಿ ಬಿಡದ ಬಿ.ವೈ.ರಾಘವೇಂದ್ರ ಸಂಸದರಾಗಿದ್ದೇ ವೇಸ್ಟ್ . ಬಿಜೆಪಿಯಿಂದ ಗೆದ್ದ 25 ಮಂದಿ ಸಂಸದರು ರಾಜ್ಯದ ಪರವಾಗಿ ಯಾವತ್ತೂ ಧ್ವನಿ ಎತ್ತಲಿಲ್ಲ. ಇಂಥವರನ್ನು ಗೆಲ್ಲಿಸಿ ನಿಮಗಾಗಲೀ, ರಾಜ್ಯಕ್ಕಾಗಲೀ, ಜಿಲ್ಕೆಗಾಗಲಿ ಏನೇನೂ ಪ್ರಯೋಜನವಿಲ್ಲ ಎಂದರು.
ಮೋದಿಗೆ ಕರ್ನಾಟಕ ನೆನಪಾಗೋದು ಚುನಾವಣೆ ಬಂದಾಗ ಮಾತ್ರ. ಬರಗಾಲ ಬಂದಾಗ, ಪ್ರವಾಹ ಬಂದಾಗಲೂ ರಾಜ್ಯ ನೆನಪಾಗಲಿಲ್ಲ. ರಾಜ್ಯಕ್ಕೆ ನಿರಂತರವಾಗಿ
ಅನ್ಯಾಯ ಮಾಡುತ್ತಲೇ ಇರುವ ಮೋದಿ ದ್ವೇಷದ ರಾಜಕಾರಣ ಮಾಡಿ, ಮಲತಾಯಿ ಧೋರಣೆಯನ್ನು ತೋರಿ ದೊಡ್ಡ ಅನ್ಯಾಯ ಮಾಡುತ್ತಿದೆ. ಪ್ರವಾಹ ಅಥವಾ ಬರಗಾಲ ಬಂದಾಗ ರಾಜ್ಯಕ್ಕೆ ಬಂದು ಜನರ ಕಷ್ಟ ಸುಖ ಕೇಳುವ ಪ್ರಯತ್ನವನ್ನೂ ಮೋದಿ ಮಾಡಲೇ ಇಲ್ಲ ಎಂದರು.
ಬಿಜೆಪಿ, ಬಡವರು, ರೈತರ , ಮಹಿಳೆಯರ ವಿರುದ್ಧವಾಗಿರುವ ಸರ್ಕಾರ
10 ವರ್ಷಗಳಲ್ಲಿ ಮೋದಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. 15 ಲಕ್ಷ ಕಪ್ಪು ಹಣ ತರಲಿಲ್ಲ, 2 ಕೋಟಿ ಉದ್ಯೋಗ ಸೃಷ್ಟಿಸಲಿಲ್ಲ, ಅಗತ್ಯ ವಸ್ತುಗಳ ಬೆಲೆ ಕಡಿಮೆ ಮಾಡಲಿಲ್ಲ. ಅಚ್ಚೇ ದಿನ್ ಬರಲಿಲ್ಲ. ದೇಶ ಹಾಗೂ ರಾಜ್ಯದ ಜನ ಬೆಲೆಯೇರಿಕೆ, ಹಣದುಬ್ಬರ ಜಾಸ್ತಿಯಾದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಾಲ ಮನ್ನಾ ಮಾಡಿ, ನ್ಯಾಯಯುತ ಬೆಲೆ ಕೊಡಿ, ಎಂ.ಎಸ್.ಪಿ ಗೆ ಕಾನೂನು ರೂಪಿಸಿ ಎಂದು ಹೋರಾಟ ಮಾಡಿದರೂ ನರೇಂದ್ರ ಮೋದಿ ಜಗ್ಗಲಿಲ್ಲ.
ಬಿಜೆಪಿ, ಬಡವರು, ರೈತರ , ಮಹಿಳೆಯರ ವಿರುದ್ಧವಾಗಿರುವ ಸರ್ಕಾರ. ಆದ್ದರಿಂದಲೇ ಅವರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಿಲ್ಲ ಎಂದರು.
ಬಡವರಿಗೆ ಶಕ್ತಿ ತುಂಬಲಾಗಿದೆ
ಶಕ್ತಿ, ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಎಂಟು ತಿಂಗಳೊಳಗೆ ಜಾರಿಗೆ ತಂದಿದ್ದೇವೆ. ಶಕ್ತಿ ಯೋಜನೆಯಡಿ ಪ್ರಯಾಣಿಸಿದ್ದ ಅರಸೀಕೆರೆಯ ಹೆಣ್ಣುಮಗಳೊಬ್ಬಳು ಟಿಕೆಟ್‍ಗಳ ಹಾರ ಹಾಕಿದ್ದನ್ನು ಮುಖ್ಯಮಂತ್ರಿಗಳು ಸ್ಮರಿಸಿದರು.
ಅಂತೆಯೇ ಕೊಪ್ಪಳದ ಮಹಿಳೆಯೊಬ್ಬಳು ಗೃಹಲಕ್ಷ್ಮೀ ಯೋಜನೆಯ ಹಣ ಹಾಗೂ ಗೃಹಜ್ಯೋತಿ ಯೋಜನೆಯಿಂದ ಉಳಿತಾಯವಾದ ಮೊತ್ತದಲ್ಲಿ ಚಿನ್ನದುಂಗುರವನ್ನು ಖರೀದಿಸಿರುವುದನ್ನೂ ಮುಖ್ಯಮಂತ್ರಿಗಳು ಉಲ್ಲೇಖಿಸಿದರು.
ಬಡವರಿಗೆ ಶಕ್ತಿ ತುಂಬುವ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದರು.
ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಘೋಷಿಸಿರುವ ಗ್ಯಾರಂಟಿಗಳನ್ನು ಜಾರಿಗೆ ತರಲಾಗುವುದು. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಕಾಂಗ್ರೆಸ್ ಹಾಗೂ ಸರ್ಕಾರಕ್ಕೆ ಶಕ್ತಿ ತುಂಬಬೇಕು ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಸಂಸದರು ರಾಜ್ಯದ ಸಮಸ್ಯೆ ಬಗ್ಗೆ ಧ್ವನಿ ಎತ್ತಲಿಲ್ಲ
ಲೋಕಸಭೆಯಲ್ಲಿ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡುವಂಥವರನ್ನು ಮತದಾರರು ಆಯ್ಕೆ ಮಾಡಬೇಕು. ರಾಜ್ಯದಿಂದ 25 ಸಂಸದರು ಬಿಜೆಪಿಯಿಂದ ಆಯ್ಕೆಯಾದರು, ಆದರೆ ಯಾರೂ ಸಹ ಕೇಂದ್ರದಿಂದ ಕನ್ನಡಿಗರಿಗೆ ಆದ ಅನ್ಯಾಯದ ಬಗ್ಗೆ ಮಾತನಾಡಲಿಲ್ಲ. ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ನೀಡುವುದಾಗಿ ಕೇಂದ್ರ ಬಜೆಟ್ ನಲ್ಲಿ ಘೋಷಿಸಿದರೂ, ಒಂದು ಪೈಸೆಯನ್ನೂ ಬಿಡುಗಡೆ ಮಾಡಲಿಲ್ಲ ಎಂದರು.
ಎನ್ ಡಿ ಆರ್ ಎಫ್ ಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು
ರಾಜ್ಯಕ್ಕೆ ಭೀಕರ ಬರಗಾಲದ ಪರಿಸ್ಥಿತಿ ಎದುರಾದರೂ ಸಹ ಕೇಂದ್ರ ಬರಪರಿಹಾರವನ್ನು ಬಿಡುಗಡೆ ಮಾಡಲಿಲ್ಲ. ಕರ್ನಾಟಕದಲ್ಲಿ 48 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ, 35 ಸಾವಿರ ಕೋಟಿ ನಷ್ಟವಾಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನಮ್ಮ ಸಂಪನ್ಮೂಲಗಳಿಂದ ತಲಾ ಎರಡು ಸಾವಿರದಂತೆ 34 ಲಕ್ಷ ರೈತರಿಗೆ ಪರಿಹಾರ ನೀಡಲಾಯಿತು.
ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರಾಜ್ಯಕ್ಕೆ 18172 ಕೋಟಿ ರೂ.ಗಳ ಬರ ಪರಿಹಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಎನ್ ಡಿ ಆರ್ ಎಫ್ ಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ, ಅದು ನಮ್ಮ ಹಕ್ಕು.
ರಾಜ್ಯಕ್ಕಾದ ಅನ್ಯಾಯವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ನಡೆಸಿದ ಹೋರಾಟಕ್ಕೆ ಪ್ರತಿಯಾಗಿ ಕೇಂದ್ರ ಸರ್ಕಾರ ಕೇವಲ 3454 ಕೋಟಿ ರೂ.ಗಳನ್ನು ನೀಡಿ ಮತ್ತೆ ಮತ್ತೆ ದ್ರೋಹ ಮಾಡುತ್ತಲೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
AICC ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು, AICC ಮಾಜಿ ಅಧ್ಯಕ್ಷರಾದ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್,AICC ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ, ಸಚಿವ ಮಧು ಬಂಗಾರಪ್ಪ, ಶಾಸಕರಾದ ಗೋಪಾಲಕೃಷ್ಣ ಬೇಳೂರು, ಬಿ.ಕೆ.ಸಂಗಮೇಶ್, ವಿಧಾನ ಪರಿಷತ್ ಸದಸ್ಯರೂ ಪಕ್ಷದ ಕಾರ್ಯಾಧ್ಯಕ್ಣರೂ ಆದ ಮಂಜುನಾಥ್ ಭಂಡಾರಿ , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್ ಸೇರಿ ಜಿಲ್ಲಾ ಮುಖಂಡರುಗಳು ಉಪಸ್ಥಿತರಿದ್ದರು.