ರಾಮನಗರ(Ramanagara): ಬಿಜೆಪಿ ಹಮ್ಮಿಕೊಂಡಿರುವ ವಿಜಯ ಸಂಕಲ್ಪ ಯಾತ್ರೆ ಸೇರಿದಂತೆ ಪ್ರತಿಯೊಂದು ಚಟುವಟಿಕೆಯೂ ರಾಮನಗರ ಜಿಲ್ಲೆಯಲ್ಲಿ ರಚನಾತ್ಮಕ ರೀತಿಯಲ್ಲಿ ನಡೆಯುತ್ತಿದೆ. ಇದರಿಂದ ಕಾಂಗ್ರೆಸ್, ಜೆಡಿಎಸ್ ಎರಡೂ ನೆಮ್ಮದಿ ಕಳೆದುಕೊಂಡಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.
ಗುರುವಾರ ಇಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಓಲೈಕೆ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸಿಗೆ ಶ್ರೀರಾಮನ ಹೆಸರು ಕೇಳಿದರೆ ನಡುಕ ಶುರುವಾಗುತ್ತದೆ. ಮೊದಲು ಕ್ಲೋಸ್ ಪೇಟೆ ಆಗಿದ್ದ ರಾಮನಗರಕ್ಕೆ ಈಗಿನ ಹೆಸರು ಬರಲು ಶ್ರೀರಾಮನೇ ಕಾರಣ. ಹೀಗಾಗಿ ಇಲ್ಲಿನ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯಾಗಿ ಬೆಳೆಸಲು ತೀರ್ಮಾನ ಮಾಡಲಾಗಿದೆ. ಡಿಪಿಆರ್’ಗೆ ಸರ್ಕಾರ ಸೂಚಿಸಿದೆ ಎಂದರು.
ಕಾಂಗ್ರೆಸ್ಸಿನವರು ರಾಮನನ್ನು ನೆನಪಿಸಿಕೊಂಡು, ಗೌರವಿಸಿದ ನಿದರ್ಶನವೇ ಇಲ್ಲ. ಇಲ್ಲಿಯ ರಾಮದುರ್ಗವನ್ನು ಹಿಂದೆ ನಾಡಪ್ರಭು ಕೆಂಪೇಗೌಡರು ಅಭಿವೃದ್ಧಿ ಪಡಿಸಿದ್ದರು. ಶ್ರೀರಾಮನು ಅಯೋಧ್ಯೆಯನ್ನು ಹೊರತುಪಡಿಸಿದರೆ ಹೆಚ್ಚು ಕಾಲ ಓಡಾಡಿದ್ದೇ ಇಂದಿನ ಕರ್ನಾಟಕದಲ್ಲಿ. ಇದನ್ನು ಕಾಂಗ್ರೆಸ್ಸಿಗರು ಮೊದಲು ಅರಿಯಬೇಕು ಎಂದು ಅವರು ನುಡಿದರು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಮ್ಮ ವಿರುದ್ಧದ ಸಿ.ಡಿ. ಪ್ರಕರಣ ಕುರಿತು ಸಿಬಿಐ ತನಿಖೆಗೆ ಮನವಿ ಮಾಡಿರುವುದರಲ್ಲಿ ತಪ್ಪಿಲ್ಲ. ಸಿ.ಡಿ. ಇಟ್ಟುಕೊಂಡು ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುವವರಿಗೆ ಇದರಿಂದ ಬುದ್ಧಿ ಕಲಿಸಿದಂತೆ ಆಗುತ್ತದೆ. ಇದರಿಂದ ಸತ್ಯಾಂಶ ಹೊರಬರಲಿದೆ ಎಂದು ಅವರು ಪ್ರತಿಪಾದಿಸಿದರು.