ಮನೆ ರಾಜ್ಯ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಜಭವನ ಮುತ್ತಿಗೆಗೆ ಯತ್ನ

ರಾಜ್ಯಪಾಲರ ವಿರುದ್ಧ ಕಾಂಗ್ರೆಸ್ ಬೃಹತ್ ಪ್ರತಿಭಟನೆ: ರಾಜಭವನ ಮುತ್ತಿಗೆಗೆ ಯತ್ನ

0

ಬೆಂಗಳೂರು: ‌ಮುಡಾ ಹಗರಣ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ ಇಂದು ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಬೃಹತ್‌ ಪ್ರತಿಭಟನೆಗೆ ವೇಗ ದೊರೆತಿದೆ.

Join Our Whatsapp Group

ಮುಂಜಾನೆಯಿಂದ ಕಾಂಗ್ರೆಸ್‌ ಕಾರ್ಯಕರ್ತರು ಎಲ್ಲೆಡೆ ಜಮಾಯಿಸಿ ರಾಜ್ಯಪಾಲರಿಗೆ ಧಿಕ್ಕಾರ ಕೂಗಿದರು. ರಾಜಧಾನಿಯಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್‌ ನಾಯಕರು ಭಾಗವಹಿಸಿ ಧರಣಿ ಪ್ರತಿಭಟನೆ ನಡೆಸಿದರು.

ಫ್ರೀಡಂ ಪಾರ್ಕ್‌ ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಬಿಕೆ ಹರಿಪ್ರಸಾದ್, ಯುಬಿ ವೆಂಕಟೇಶ್, ಸಲೀಂ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಫ್ರೀಡಂ ಪಾರ್ಕ್‌ ನಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಮೂರು ಕೆಎಸ್‌ಆರ್‌ಪಿ ತುಕಡಿ, 100 ಮಹಿಳಾ ಪೊಲೀಸ್, 10 ಪಿಎಸ್‌ಐ, 5 ಪಿಐಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಬೆಳ್ಳಂಬೆಳಗ್ಗೆಯೇ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದಿದ್ದಾರೆ. ರಾಜ್ಯಪಾಲರ ವಿರುದ್ಧ ಬೀದಿಗಿಳಿದಿದ್ದು, ರಾಜಧಾನಿಯಲ್ಲಿ ರಾಜಭವನ ಮುತ್ತಿಗೆಗೆ ಕೈ ಕಾರ್ಯಕರ್ತರು ಯತ್ನಿಸಿದರು. ರಾಜ್ಯಪಾಲರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜಭವನಕ್ಕೆ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ʼಗವರ್ನರ್ ಗೋ ಬ್ಯಾಕ್‌ʼ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದರು.

ʼಷಡ್ಯಂತ್ರಕ್ಕೆ ಸವಾಲ್ʼ ಎಂಬ ಹೆಸರಿನಲ್ಲಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್‌ ಪ್ರತಿಭಟನೆ ಆಯೋಜಿಸಿದ್ದು, ರಾಜ್ಯಪಾಲರ, ಬಿಜೆಪಿ- ಜೆಡಿಎಸ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ಆಯೋಜನೆ ಮಾಡಿದೆ. ಕನಿಷ್ಠ ಅರ್ಧ ಕಿಲೋಮೀಟರ್ ಪಾದಯಾತ್ರೆ ಮೂಲಕ ಪ್ರೊಟೆಸ್ಟ್ ಮಾಡಲಿದೆ. ಪ್ರತಿಭಟನೆ ಬಳಿಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಿದೆ. ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್‌ ಆಕ್ಷೇಪಿಸಿದೆ.