ಮನೆ ರಾಜಕೀಯ ಕರ್ನಾಟಕದ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಿರುವ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

ಕರ್ನಾಟಕದ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಿರುವ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ

0

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಜನರಿಗೆ ನೀರು ಹೇಗೆ ನೀಡುತ್ತೇವೆ ಎಂದು ತಿಳಿಸುವುದನ್ನು ಬಿಟ್ಟು ನೀರನ್ನು ಹೇಗೆ ಮಿತವಾಗಿ ಬಳಸಬೇಕು ಎಂದು ಜನರಿಗೆ ತಿಳಿ ಹೇಳುತ್ತಿದೆ. ಜನರು ಪ್ರಜ್ಞಾವಂತರಾಗಿದ್ದು ನೀರನ್ನು ಹೇಗೆ ಬಳಸಬೇಕೆಂದು ಅವರಿಗೂ ಗೊತ್ತಿದೆ. ಸರ್ಕಾರ ಮೊದಲು ನೀರು ನೀಡುವ ಕುರಿತು ಹಾಗೂ ಮೇಕೆದಾಟು ಯೋಜನೆ ಕುರಿತು ನಿಲುವು ತಿಳಿಸಲಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮಾಧ್ಯಮ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 

ಇಡೀ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಕೇಳಿಬಂದಿದೆ. ನೀರು ಕೊಡುವುದನ್ನು ಬಿಟ್ಟು ಮಿತವಾಗಿ ಬಳಸಿ ಎಂಬ ಸಂದೇಶ ನೀಡುತ್ತಿದ್ದಾರೆ. ನೀರನ್ನು ಹೇಗೆ ಬಳಸಬೇಕೆಂದು ಜನರಿಗೆ ಗೊತ್ತಿದೆ. ಜಲಮಂಡಳಿಯಂತೂ ಕಾರು ತೊಳೆಯಬೇಡಿ, ಸ್ನಾನ ಮಾಡಬೇಡಿ ಎಂದು ತಿಳಿ ಹೇಳುತ್ತಿದೆ. ಆದರೆ ನೀರನ್ನು ಹೇಗೆ ಕೊಡುತ್ತೇವೆ ಎಂದು ಹೇಳುತ್ತಿಲ್ಲ. ಪಾಪರ್‌ ಆಗಿರುವ ಸರ್ಕಾರದಲ್ಲಿ ಕುಡಿಯುವ ನೀರು ನೀಡಲು ಕೂಡ ಹಣವಿಲ್ಲ. ಜನರು ಈ ಬಾರಿ ತಪ್ಪದೇ ಮತದಾನ ಕೇಂದ್ರಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಇತ್ತೀಚೆಗೆ ನಡೆದ ಸೆಮಿಫೈನಲ್‌ನಲ್ಲಿ ಕಾಂಗ್ರೆಸ್‌ ಸೋತು ಸುಣ್ಣವಾಗಿದ್ದು, ಬಿಜೆಪಿ ಮೂರು ರಾಜ್ಯಗಳನ್ನು ಗೆದ್ದಿದೆ. ಬಿಜೆಪಿ ಈಗಾಗಲೇ ಅಂತಿಮ ಹಂತಕ್ಕೆ ಬಂದಾಗಿದ್ದರೂ, INDI ಒಕ್ಕೂಟದಲ್ಲಿ ಎಲ್ಲರೂ ಬಿಟ್ಟು ಹೋಗಿ ನಾಯಕರಿಲ್ಲದೆ ದಿಕ್ಕಿಲ್ಲದಂತಾಗಿದೆ. ಎಲ್ಲವೂ ಫಿಕ್ಸ್‌ ಆಗಿದ್ದರೂ ಅವರಿಗೆ ನಾಯಕತ್ವವೇ ಇಲ್ಲ. ಅದು ಫಿಕ್ಸ್‌ ಆಗುವ ಮುನ್ನವೇ ಮ್ಯಾಚ್‌ ಮುಗಿದು ಒಕ್ಕೂಟ ಸೋಲಲಿದೆ ಎಂದರು.

ಹತ್ತು ತಿಂಗಳಲ್ಲಿ ಸಮಾಜದ್ರೋಹಿ ಕೆಲಸಗಳನ್ನು ಕಾಂಗ್ರೆಸ್‌ ಸರ್ಕಾರ ಮಾಡಿದೆ. ಹನುಮ ಧ್ವಜ ಕೆಳಕ್ಕಿಳಿಸಿದ್ದು, ಕರಸೇವಕರ ವಿರುದ್ಧ ಪ್ರಕರಣ, ಕಾಂಗ್ರೆಸ್‌ ಕಾರ್ಯಕರ್ತರಿಂದ ಪಾಕಿಸ್ತಾನಕ್ಕೆ ಜೈಕಾರ, ಭಯೋತ್ಪಾದನಾ ಚಟುವಟಿಕೆ ಹೆಚ್ಚಳ ಮೊದಲಾದ ಸಮಸ್ಯೆಗಳು ಉಂಟಾಗಿವೆ. ಬಿಜೆಪಿ ಸರ್ಕಾರವಿದ್ದಾಗ ಪ್ರವಾಹದ ಕುರಿತು ದೂರುಗಳು ಬರುತ್ತಿತ್ತು. ಈ ಸರ್ಕಾರದ ಅವಧಿಯಲ್ಲಿ ಬರಗಾಲ ಬಂದಿದೆ. ಬಿ.ಎಸ್‌.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ ಸಂಪುಟ ರಚನೆಯಾಗುವ ಮುನ್ನವೇ ಮಳೆ ಬಂದಿತ್ತು. ಈಗ ಸಿಎಂ ಸಿದ್ದರಾಮಯ್ಯ ಕಾಲಿಟ್ಟ ಕಡೆಯಲ್ಲೆಲ್ಲ ಬರ ಉಂಟಾಗಿದೆ. ಏನಿಲ್ಲ ಏನಿಲ್ಲ, ನೀರಿಲ್ಲ ಎಂಬ ಸ್ಥಿತಿ ಉಂಟಾಗಿದೆ ಎಂದರು.

ಕೇಂದ್ರದಲ್ಲಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೇಕೆದಾಟು ಯೋಜನೆ ಜಾರಿಯಾಗಲು ಬಿಡಲ್ಲ ಎಂದು ಡಿಎಂಕೆ ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ಹೇಳಿದೆ. ಇಲ್ಲಿ ಕಾಂಗ್ರೆಸ್ ಪ್ರತಿಕ್ರಿಯೆ ನೀಡದೆ ಸತ್ತುಹೋಗಿದೆ. 136 ಶಾಸಕರು ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ತೆರಿಗೆಗಾಗಿ ಪ್ರತಿಭಟಿಸಿದ್ದರು. ಈಗ ಕರ್ನಾಟಕದ ನೀರು ತಮಿಳುನಾಡು ಹಕ್ಕು ಎಂದು ಹೇಳುತ್ತಿದ್ದಾರೆ. ಆನೆಯಿಂದ ವಯನಾಡಿನ ವ್ಯಕ್ತಿ ಮೃತಪಟ್ಟಾಗ ಇದು ರಾಜ್ಯದ ಆನೆ ಎಂಬ ಹಣೆಪಟ್ಟಿ ಕೊಟ್ಟು 15 ಲಕ್ಷ ರೂ. ಪರಿಹಾರ ನೀಡಿದ್ದರು. ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.