ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ 39ನೇ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವದ ಸಂಭ್ರಮಾಚರಣೆ ದಿನದಿಂದ ದಿನಕ್ಕೆ ಮೆರುಗು ಪಡೆಯುತ್ತಿದೆ. ಶತಮಾನೋತ್ಸವದ ಸಮಿತಿಯ ಅಧ್ಯಕ್ಷರೂ ಆದ ಕಾನೂನು ಮತ್ತು ಸಂಸದಿಯ ವ್ಯವಹಾರಗಳ ಖಾತೆ ಸಚಿವ ಹೆಚ್.ಕೆ. ಪಾಟೀಲ ಅವರು ಮಂಗಳವಾರ ಸಾಂಕೇತಿಕವಾಗಿ ಸ್ವಾತಂತ್ರ್ಯ ಯೋಧರ ಮನೆಗಳಿಗೆ ತೆರಳಿ ಸುವರ್ಣಸೌಧದ ಮುಂದೆ ಪ್ರತಿಷ್ಠಾಪಿಸಲಾಗಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ಆಗಮಿಸಲು ಆಹ್ವಾನ ನೀಡಿದರು.
ರಾಮತೀರ್ಥನಗರದಲ್ಲಿ ಇರುವ ಅಣ್ಣು ಗುರೂಜಿ ಅವರ ಮನೆಗೆ, ಹನುಮಾನ ನಗರದಲ್ಲಿರುವ ವಿಠ್ಠಲರಾವ್ ಯಾಳಗಿ ಹಾಗೂ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ರೂವಾರಿ ಗಂಗಾಧರರಾವ್ ದೇಶಪಾಂಡೆ ಅವರ ಮನೆಗಳಿಗೆ ಖುದ್ದಾಗಿ ಭೇಟಿ ನೀಡಿದ ಹೆಚ್.ಕೆ.ಪಾಟೀಲರು ಆಹ್ವಾನ ನೀಡಿದರು.
”ಅಸ್ಪೃಶ್ಯತೆ ನಿವಾರಣೆಗೆ ಗಾಂಧಿಜಿ ಕರೆ ಕೊಟ್ಟ ಕಾಲಘಟ್ಟದಲ್ಲಿ ಬೆಳಗಾವಿ ಅಧಿವೇಶನ ನಡೆಯತ್ತಿತ್ತು. ನಮ್ಮ ಮನೆತನದವರು ಸ್ವಯಂಪ್ರೇರಿತರಾಗಿ ಭಂಗಿ ಬಳಿಯಲು ಮುಂದಾದರು. ಹೀಗಾಗಿ, ಅವರು ಮುಂಚೂಣಿಯಲ್ಲಿ ಇರಲಿಲ್ಲ. ಇದನ್ನು ಈಗ ಊಹಿಸಿಕೊಳ್ಳವುದೂ ಕಷ್ಟ” ಎಂದು ಅಣ್ಣು ಗುರೂಜಿ ಅವರ ಮೊಮ್ಮಗ ಮಹೇಶ ದೇಶಪಾಂಡೆ ಅವರು ಹೆಚ್.ಕೆ.ಪಾಟೀಲರಿಗೆ ವಿವರಿಸಿದರು.
”ನಮ್ಮೂರು ಹಾಗೂ ಸುತ್ತಮುತ್ತಲಿನ ಊರುಗಳ ಜನರು ಗಾಂಧೀಜಿಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಧುಮುಕಿದರು ಎಂದು ನಮ್ಮಜ್ಜ ಹೇಳುತ್ತಿದ್ದರು. ನಾವೆಲ್ಲಾ ಅಜ್ಜನ ನೆರಳಿನಲ್ಲೇ ಬೆಳೆದವರು. ನಮ್ಮಜ್ಜ ತಲಾಠಿ ನೌಕರಿ ಬಿಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು. ನಾನು ಈ ಎಲ್ಲ ಮಾಹಿತಿ, ದಾಖಲೆ ಸಂಗ್ರಹಿಸಿರುವೆ” ಎಂದರು.
”ಇದು ಪುಸ್ತಕ ರೂಪದಲ್ಲಿ ಬರಬೇಕು” ಎಂದು ಸಚಿವರು ದೇಶಪಾಂಡೆ ಅವರಿಗೆ ಸಲಹೆ ನೀಡಿದರು. ಬೆಳಗಾವಿ ಅಧಿವೇಶನ ಕುರಿತು ಅಣ್ಣು ಗುರೂಜಿ ಬರೆದ ಕಿರು ಪುಸ್ತಕ ಮರು ಮುದ್ರಿಸಲು ಆದೇಶ ನೀಡಿದರು. ”ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹಾಗೂ ಹೋರಾಡಿದ ಯೋಧರನ್ನು ಎಂದಿಗೂ ಮರೆಯಬಾರದು. ನೈಜವಾಗಿ ದುಡಿದವರ ಸೇವೆ ಸ್ಮರಿಸಬೇಕು, ಇದು ನಮ್ಮ ಕರ್ತವ್ಯ” ಎಂದು ಸಚಿವ ಹೆಚ್.ಕೆ.ಪಾಟೀಲ ಅವರು ಹೇಳಿದರು.
ನಂತರ ಸಚಿವ ಎಚ್.ಕೆ.ಪಾಟೀಲರು ಸುವರ್ಣಸೌಧಕ್ಕೆ ತೆರಳಿ ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣ ಸಿದ್ಧತೆಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ಮತ್ತಿತರರು ಇದ್ದರು.