ಮಂಡ್ಯ: ಕಾಂಗ್ರೆಸ್ ಗುರುವಾರ ಪ್ರಕಟಿಸಿರುವ 43 ಹೆಸರು ಇರುವ ಅಭ್ಯರ್ಥಿಗಳ 2 ನೇ ಪಟ್ಟಿಯಲ್ಲಿ ಮಂಡ್ಯ ಕ್ಷೇತ್ರದಿಂದ ಗಣಿಗ ಪಿ.ರವಿಕುಮಾರ್, ಕೆ.ಆರ್.ಪೇಟೆಯಿಂದ ಬಿ.ಎಲ್.ದೇವರಾಜು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.
ಮೇಲುಕೋಟೆ ಕ್ಷೇತ್ರದಲ್ಲಿ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಅವರಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ.
ಮದ್ದೂರು ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಬೇಕಿದೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚು ಇದ್ದುದರಿಂದ ಅಭ್ಯರ್ಥಿ ಆಯ್ಕೆ ವರಿಷ್ಠರಿಗೆ ತಲೆನೋವಾಗಿತ್ತು. ಹಾಗಾಗಿ,ಮೊದಲ ಪಟ್ಟಿಯಲ್ಲಿ ಕ್ಷೇತ್ರದ ಅಭ್ಯರ್ಥಿ ಹೆಸರು ಇರಲಿಲ್ಲ. ಕೊನೆಗೂ ಕಾಂಗ್ರೆಸ್‌ನವರು ರವಿಕುಮಾರ್‌ಗೆ ಟೀಕೇಟ್ ನೀಡಿದ್ದಾರೆ.
ಈ ಹಿಂದೆ ಎಂ.ಶ್ರೀನಿವಾಸ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ರವಿಕುಮಾರ್ ಗೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಮಣೆ ಹಾಕಿದೆ.
ಕಳೆದ ವಾರವಷ್ಟೇ ಜೆಡಿಎಸ್ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಬಿ.ಎಲ್.ದೇವರಾಜು ಕೆ.ಆರ್.ಪೇಟೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ಇವರ ಶಿಷ್ಯ ಎಚ್.ಟಿ.ಮಂಜು ಜೆಡಿಎಸ್ ಅಭ್ಯರ್ಥಿಯಾಗಿದ್ದು ಇದು ಗುರು-ಶಿಷ್ಯರ ನಡುವಿನ ಹೋರಾಟ ಎಂದೇ ಕ್ಷೇತ್ರದಲ್ಲಿ ಬಣ್ಣಿಸಲಾಗುತ್ತಿದೆ.
ಮದ್ದೂರು ಕ್ಷೇತ್ರದ ಟಿಕೆಟ್ ಘೋಷಣೆ ಬಾಕಿ ಉಳಿದಿದ್ದು ಕುತೂಹಲ ಮೂಡಿಸಿದೆ.ಇಲ್ಲಿ ಉದ್ಯಮಿ ಕದಲೂರು ಉದಯ್ ಹಾಗೂ ಎಸ್.ಎಂ.ಕೃಷ್ಣ ಅವರ ಸಹೋದರನ ಪುತ್ರ ಎಸ್.ಗುರುಚರಣ್ ನಡುವೆ ಪೈಪೋಟಿ ಇದೆ.