ಮನೆ ಸುದ್ದಿ ಜಾಲ ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ: ಡಿಸಿ‍ಪಿ ಗೀತಾ ಪ್ರಸನ್ನ

ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ: ಡಿಸಿ‍ಪಿ ಗೀತಾ ಪ್ರಸನ್ನ

0

ಮೈಸೂರು(Mysuru): ಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ ಎಂಬುದನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಡಿಸಿ‍ಪಿ ಗೀತಾ ಪ್ರಸನ್ನ ತಿಳಿಸಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ವತಿಯಿಂದ ನಗರದ ವಿದ್ಯಾವರ್ಧಕ ಕಾಲೇಜು ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಗ್ರಾಹಕ ಜಾಗೃತಿ ಸಮಾವೇಶವನ್ನು ಭಾರತ ಮಾತೆಯ ಫೋಟೊಗೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರಿಗೂ ಗ್ರಾಹಕರ ಹಕ್ಕುಗಳ ಅರಿವು ಅಗತ್ಯ. ಗ್ರಾಹಕರು ಪ್ರತಿ ಖರೀದಿಯ ಮೇಲೆ ರಸೀದಿ ಪಡೆಯುವುದನ್ನು ರೂಢಿ ಮಾಡಿಕೊಳ್ಳಬೇಕು. ನಾವು ಜಾಗೃತರಾದಷ್ಟೂ ಸಮಾಜದ ಪ್ರಗತಿಯೂ ಸುಲಭವಾಗುತ್ತದೆ ಎಂದರು.

ಹುಟ್ಟಿನಿಂದ ಸಾಯುವವರೆಗೂ ಪ್ರತಿ ವ್ಯಕ್ತಿಯೂ ಗ್ರಾಹಕನಾಗಿರುತ್ತಾನೆ. ಕಾನೂನುಗಳು ಎಲ್ಲರಿಗೂ ಅನ್ವಯವಾಗುತ್ತವೆ. ಎಲ್ಲರೂ ಕಾನೂನಿನ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು ಮತ್ತು ನಮ್ಮ ಜವಾಬ್ದಾರಿಯನ್ನು ಪ್ರದರ್ಶಿಸುವಂತಾಗಬೇಕು. ಆಗ ಮೋಸಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಕೇಂದ್ರೀಯ ಮಹಿಳಾ ಜಾಗರಣ ಪ್ರಮುಖರಾದ ಆಶಾ ಸಿಂಗ್ ಮಾತನಾಡಿ, ಗ್ರಾಹಕರು ಹಕ್ಕುಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ ಗ್ರಾಹಕ ಶಕ್ತಿ ಸಂಶೋಧನಾ ಕೇಂದ್ರ ಸ್ಥಾಪಿಸಿದೆ. ಜನರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮಾರ್ಗದರ್ಶನ ಸೇವಾ ಕೇಂದ್ರಗಳ ಸಹಾಯ ಪಡೆಯಬಹುದು. ಮೋಸ, ವಂಚನೆ ನಡೆದಾಗ ಎಲ್ಲರೂ ಸಂಘಟಿತವಾಗಿ ಹೋರಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ತಿಳಿಸಿದರು.

ವಿದ್ಯಾವರ್ಧಕ ಕಾನೂನು ಕಾಲೇಜಿನ ಖಜಾಂಚಿ ಶ್ರೀಶೈಲ ರಾಮಣ್ಣವರ, ಪ್ರೊ.ಕೆ.ಬಿ.ವಾಸುದೇವ, ಪ್ರಾಂಶುಪಾಲ ದೀಪು, ಅಖಿಲ ಭಾರತೀಯ ಗ್ರಾಹಕ ಪಂಚಾಯತ್‌ನ ಪ್ರಮುಖರಾದ ಗಾಯತ್ರಿ ನಾಡಿಗ್, ಮೈಸೂರು ಘಟಕದ ಅಧ್ಯಕ್ಷ ಡಾ.ಜಿ.ವಿ.ರವಿಶಂಕರ್, ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಮೈಸೂರು ವಲಯದ ಮಹಿಳಾ ಪ್ರಮುಖರಾದ ವಾಣಿ ಭಾಸ್ಕರ್, ಕಾರ್ಯದರ್ಶಿ ರಾಘವೇಂದ್ರ, ಲತಾ, ರವಿಶಂಕರ್, ವಕೀಲರಾದ ಶಿವರಾಜ್ ಇದ್ದರು.

ಹಿಂದಿನ ಲೇಖನ‘ಸ್ಪೂಕಿ ಕಾಲೇಜ್’ ಚಿತ್ರದಲ್ಲಿ ‘ಮೆಲ್ಲುಸಿರೆ ಸವಿಗಾನ’ ಹಾಡು
ಮುಂದಿನ ಲೇಖನಐಪಿಎಲ್- 2023: ಸಿಎಸ್’ಕೆ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯೇ ನಾಯಕ