ಮನೆ ಮನರಂಜನೆ ‘ಸ್ಪೂಕಿ ಕಾಲೇಜ್’ ಚಿತ್ರದಲ್ಲಿ ‘ಮೆಲ್ಲುಸಿರೆ ಸವಿಗಾನ’ ಹಾಡು

‘ಸ್ಪೂಕಿ ಕಾಲೇಜ್’ ಚಿತ್ರದಲ್ಲಿ ‘ಮೆಲ್ಲುಸಿರೆ ಸವಿಗಾನ’ ಹಾಡು

0

60ರ ದಶಕದಲ್ಲಿ ತೆರೆಕಂಡ ಡಾ. ರಾಜ್ಕುಮಾರ್ ಹಾಗೂ ಲೀಲಾವತಿ ಅಭಿನಯಿಸಿದ್ದ ‘ವೀರ ಕೇಸರಿ’ ಚಿತ್ರದ ‘ಮೆಲ್ಲುಸಿರೆ ಸವಿಗಾನ..’ ಹಾಡು ದೊಡ್ಡ ಹಿಟ್ ಆಗಿತ್ತು. ಈಗಲೂ ಕೂಡ ಈ ಹಾಡನ್ನು ಸಿನಿಪ್ರಿಯರು ಗುನುಗುತ್ತಾರೆ. ಇದೀಗ ಅದೇ ಹಾಡನ್ನು ಮತ್ತೊಮ್ಮೆ ಬಳಕೆ ಮಾಡಿಕೊಳ್ಳಲಾಗಿದೆ.

‘ಸ್ಪೂಕಿ ಕಾಲೇಜ್’ ಚಿತ್ರದಲ್ಲಿ ಈ ಹಾಡನ್ನು ಮರುಬಳಕೆ ಮಾಡಿಕೊಳ್ಳಲಾಗಿದೆ. ವಿಶೇಷವೆಂದರೆ, ಈ ಹಾಡಿನಲ್ಲಿ ‘ಏಕ್ ಲವ್ ಯಾ’ ಚಿತ್ರದ ಖ್ಯಾತಿಯ ರೀಷ್ಮಾ ನಾಣಯ್ಯ ಹೆಜ್ಜೆ ಹಾಕಿದ್ದಾರೆ. ಇತ್ತೀಚಿಗೆ ಈ ಹಾಡಿನ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಿರಿಯ ನಿರ್ದೇಶಕ ಭಗವಾನ್, ಸಾಹಿತಿ ಪದ್ಮಶ್ರೀ ದೊಡ್ಡರಂಗೇಗೌಡ ಮುಂತಾದವರು ಕಾರ್ಯಕ್ರಮದಲ್ಲಿದ್ದರು.

ಹಳೇ ಹಾಡಿಗೆ  ಲೋಪವಾಗಿಲ್ಲ

ಈ ವೇಳೆ ಮಾತನಾಡಿದ ನಿರ್ದೇಶಕ ಭಗವಾನ್, ‘ಆ ಕಾಲದಲ್ಲಿ ಸಿನಿಮಾ ಮಾಡುವುದು ಅಷ್ಟು ಸುಲಭ ಇರಲಿಲ್ಲ. ಈಗ ತಂತ್ರಜ್ಞಾನ ಮುಂದುವರೆದಿದೆ. ‘ಮೆಲ್ಲುಸಿರೆ ಸವಿಗಾನ..’ ಹಾಡಿಗೆ ಯಾವುದೇ ಲೋಪವಾಗದಂತೆ ಅಚ್ಚುಕಟ್ಟಾಗಿ ಈ ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ರೀಷ್ಮಾ ನಾಣಯ್ಯ ಅಭಿನಯ, ಭೂಷಣ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ನಿರ್ದೇಶಕ ಭರತ್ ನನ್ನ ಶಿಷ್ಯ. ಚಿತ್ರಕ್ಕೆ ಒಳ್ಳೆಯ ನಾಯಕಿ..’ ಎಂದು ಹಾರೈಸಿದರು.

ಸಾಹಿತಿ ದೊಡ್ಡರಂಗೇಗೌಡ ಮಾತನಾಡಿ, ಅರವತ್ತರ ದಶಕದ ಈ ಹಾಡನ್ನು ಈಗಿನ ರೀತಿಗೆ ಚಿತ್ರೀಕರಿಸುವುದು ಕಷ್ಟಸಾಧ್ಯ. ಅದರೆ ಅದನ್ನು ನಿರ್ದೇಶಕ ಭರತ್ ಸಾಧ್ಯವಾಗಿಸಿದ್ದಾರೆ ಎಂದರು.

ದಾಂಡೇಲಿಯಲ್ಲಿ ಚಿತ್ರೀಕರಣ

ಹಾಡನ್ನು ಚಿತ್ರೀಕರಿಸಿದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಭರತ್, ‘ಈ ಹಾಡನ್ನು ದಾಂಡೇಲಿಯಲ್ಲಿ ಚಿತ್ರಿಸಿಕೊಳ್ಳಲಾಯಿತು. ಸುಮಾರು 250 ಮಂದಿ ಇದಕ್ಕಾಗಿ ಕೆಲಸ ಮಾಡಿದ್ದಾರೆ. ಭೂಷಣ್ ನೃತ್ಯ ನಿರ್ದೇಶನದಲ್ಲಿ ರೀಷ್ಮಾ ನಾಣಯ್ಯ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಹಾಡಿಗೆ ಅಜನೀಶ್ ಲೋಕನಾಥ್ ಹೊಸ ಸ್ಪರ್ಶ ನೀಡಿದ್ದಾರೆ. ಐಶ್ವರ್ಯಾ ರಂಗರಾಜನ್ ಗಾಯನ ಹಾಗೂ ಮನೋಹರ್ ಜೋಷಿ ಅವರ ಛಾಯಾಗ್ರಹಣ ಈ ಹಾಡಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ. ವಿಶ್ವಾಸ್ ಕಲಾ ನಿರ್ದೇಶನ ಕೂಡ ಕಣ್ಮನ ಸೆಳೆಯುತ್ತದೆ. ಹಾಡು ಹಾಗೂ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕ ಎಚ್ ಕೆ ಪ್ರಕಾಶ್ ಅವರ ಸಹಕಾರ ಹಾಗೂ ನನ್ನ ಚಿತ್ರತಂಡದ ಶ್ರಮ ಕಾರಣ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗುತ್ತಿದೆ’ ಎಂದರು.

‘ಏಕ್ ಲವ್ ಯಾ’ ಸಿನಿಮಾದಿಂದ ಸ್ಯಾಂಡಲ್’ವುಡ್’ನಲ್ಲಿ ಗುರುತಿಸಿಕೊಂಡಿರುವ ನಟಿ ರೀಷ್ಮಾ ನಾಣಯ್ಯ, ಈಚೆಗಷ್ಟೇ ‘ರಾಣ’ ಚಿತ್ರದಲ್ಲೂ ನಟಿಸಿದ್ದಾರೆ. ಈಗ ‘ಮೆಲ್ಲುಸಿರೆ ಸವಿಗಾನ..’ ಚಿತ್ರಕ್ಕಾಗಿ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಈ ಸಿನಿಮಾದಲ್ಲಿ ಪ್ರೀಮಿಯರ್ ಪದ್ಮಿನಿ ಖ್ಯಾತಿಯ ವಿವೇಕ್ ಸಿಂಹ ಹೀರೋ ಆಗಿದ್ದರೆ, ದಿಯಾ ಸಿನಿಮಾ ಖ್ಯಾತಿಯ ಖುಷಿ ರವಿ ನಾಯಕಿ. ಛಾಯಾಗ್ರಹಣವನ್ನು ಮನೋಹರ್ ಜೋಷಿ ಮಾಡಿದ್ದಾರೆ. ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’ ಖ್ಯಾತಿಯ ಎಚ್ ಕೆ ಪ್ರಕಾಶ್ ಈ ಸಿನಿಮಾಕ್ಕೆ ಹಣ ಹಾಕಿದ್ದಾರೆ.

ಹಿಂದಿನ ಲೇಖನಗುಂಬಜ್ ಮಾದರಿ ವಿನ್ಯಾಸದ ಬಸ್ ನಿಲ್ದಾಣ ತೆರವಿಗೆ ನೋಟಿಸ್
ಮುಂದಿನ ಲೇಖನಜಾಗೃತ ಗ್ರಾಹಕರು ಸಮಾಜದ ಪ್ರಗತಿಯ ಮಾನದಂಡ: ಡಿಸಿ‍ಪಿ ಗೀತಾ ಪ್ರಸನ್ನ