ಮೈಸೂರು(Mysuru): ರಣಹದ್ದುಗಳ ಸಂರಕ್ಷಣೆ, ವಂಶವಾಹಿಗಳ ಕುರಿತ ಅಧ್ಯಯನಕ್ಕಾಗಿ ಮೈಸೂರು ವಿಶ್ವವಿದ್ಯಾಲಯದ ಜೆನೆಟೆಕ್ಸ್ ಹಾಗೂ ಜಿನೊಮಿಕ್ಸ್ ವಿಭಾಗ ಮತ್ತು ಅರಣ್ಯ ಇಲಾಖೆ ಒಡಂಬಡಿಕೆಗೆ ಸಹಿ ಹಾಕಿವೆ.
ಮಾನಸಗಂಗೋತ್ರಿಯಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್ ಹಾಗೂ ರಾಮನಗರದ ಡಿಸಿಎಫ್ ವಿ.ದೇವರಾಜು, ಚಾಮರಾಜನಗರ ಡಿಸಿಎಫ್ ವಿ.ಏಡುಕುಂಡಲು ಒಡಂಬಡಿಕೆಯನ್ನು ಪ್ರದರ್ಶಿಸಿದರು.
‘ರಾಮದೇವರಬೆಟ್ಟ ರಣಹದ್ದುಧಾಮ’ದಲ್ಲಿ ಸಂಶೋಧನೆ ನಡೆಯಲಿದ್ದು, ಡಿಎನ್‌ಎ ಸಂಗ್ರಹ ಕಾರ್ಯ ನಡೆಯಲಿದೆ. ಅಳಿವಿನಂಚಿನಲ್ಲಿರುವ ರಣಹದ್ದುಗಳ ತಳಿಗಳನ್ನು ಹೆಚ್ಚಿಸುವುದು ಈ ಒಪ್ಪಂದದ ಗುರಿಯಾಗಿದೆ.
ಪ್ರೊ.ಜಿ.ಹೇಮಂತಕುಮಾರ್ ಮಾತನಾಡಿ, ‘ಆಹಾರ ಸರಪಳಿಯಲ್ಲಿ ಹದ್ದುಗಳ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ರಣಹದ್ದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕಳವಳಕಾರಿ ಸಂಗತಿ. ಅದನ್ನು ತಡೆಗಟ್ಟಲು ಒಪ್ಪಂದ ಸಹಾಯಕವಾಗಲಿದ್ದು, ವಿಶ್ವವಿದ್ಯಾಲಯದ ಇತಿಹಾಸದ ಮೈಲಿಗಲ್ಲಾಗಿದೆ. ವಿಭಾಗದ ಸಂಶೋಧಕರು ಅಧ್ಯಯನ ನಡೆಸಿ ಹದ್ದುಗಳ ವಂಶವಾಶಿಗಳ ದತ್ತಾಂಶ ಸಂಗ್ರಹಿಸಲಿದ್ದು, ಈ ಜೀನ್ ಬ್ಯಾಂಕ್ ವನ್ಯಜೀವಿ ಸಂರಕ್ಷಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ’ಎಂದು ಹೇಳಿದರು.
ರಾಮನಗರದ ಡಿಸಿಎಫ್ ವಿ.ದೇವರಾಜು ಮಾತನಾಡಿ, ‘ರಾಮದೇವರಬೆಟ್ಟ ರಣಹದ್ದುಧಾಮವಾಗಿ 9 ವರ್ಷವಾಗಿದ್ದು, ಇದೇ ಮೊದಲ ಬಾರಿಗೆ ಅಳಿವಿನಂಚಿನ ರಣಹದ್ದೊಂದು ಸಂತಾನೋತ್ಪತ್ತಿ ನಡೆಸಿದೆ. ಮರಿ ಹದ್ದುಗಳು ಇನ್ನು ಹದಿನೈದು ದಿನದಲ್ಲಿ ಹಾರಲಿವೆ. ಒಪ್ಪಂದದ ಸಮಯದಲ್ಲೇ ಇಂಥ ಅಪರೂಪದ ಘಟನೆ ನಡೆದಿರುವುದು ಸಂತಸ ತಂದಿದೆ’ ಎಂದರು.
ವಿಭಾಗದ ಮುಖ್ಯಸ್ಥರಾದ ಡಾ.ಎಸ್.ಎಸ್.ಮಾಲಿನಿ ಇದ್ದರು.