ಮನೆ ಅಪರಾಧ ಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್ ಪೊಲೀಸರ ವಶಕ್ಕೆ

ಮುರುಘಾ ಶ್ರೀ ವಿರುದ್ಧ ಪಿತೂರಿ: ಸೌಭಾಗ್ಯ ಬಸವರಾಜನ್ ಪೊಲೀಸರ ವಶಕ್ಕೆ

0

ದಾವಣಗೆರೆ(Davanagere): ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಲು ವಿದ್ಯಾರ್ಥಿನಿಯರಿಗೆ ಕುಮ್ಮಕ್ಕು ನೀಡಿದ ಹಾಗೂ ಪಿತೂರಿ ನಡೆಸಿದ ಆರೋಪದಡಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅವರನ್ನು ಪೊಲೀಸರು ಗುರುವಾರ ವಶಕ್ಕೆ ಪಡೆದಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ ಪೊಲೀಸ್‌ ತಂಡ ರಚಿಸಲಾಗಿತ್ತು. ದಾವಣಗೆರೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಗುರುವಾರ ರಾತ್ರಿ ಸೌಭಾಗ್ಯರ ವಶಕ್ಕೆ ಪಡೆದು ದಾವಣಗೆರೆಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಚಿತ್ರದುರ್ಗಕ್ಕೆ ಕರೆದೊಯ್ಯಲಾಗಿದೆ.

ಬಸವರಾಜನ್ ಹಾಗೂ ಸೌಭಾಗ್ಯ ಬಸವರಾಜನ್ ದಂಪತಿ ವಿರುದ್ಧ ನವೆಂಬರ್ 9ರಂದು ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ ಪಿತೂರಿ ಆರೋಪ ಸಂಬಂಧ ಚಿತ್ರದುರ್ಗದ ಗ್ರಾಮಾಂತರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮುರುಘಾಮಠದ ಉಸ್ತುವಾರಿ ಪೀಠಾಧಿಪತಿ ಬಸವಪ್ರಭು ಶ್ರೀಗಳು ದೂರು ನೀಡಿದ್ದರು.

ಪ್ರಕರಣ ಸಂಬಂಧ ಈಗಾಗಲೇ ನ.10ರಂದು ಪೊಲೀಸರು ಮಠದ ಶಿಕ್ಷಕ ಬಸವರಾಜೇಂದ್ರ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ನ. 10ರ ರಾತ್ರಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಬಸವರಾಜನ್ ಬಂಧನವಾಗಿದೆ.