ಮನೆ ರಾಜಕೀಯ ಸಿದ್ದರಾಮಯ್ಯ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ: ಬಸನಗೌಡ ಪಾಟೀಲ್ ಯತ್ನಾಳ್

ಸಿದ್ದರಾಮಯ್ಯ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ: ಬಸನಗೌಡ ಪಾಟೀಲ್ ಯತ್ನಾಳ್

0

ವಿಜಯಪುರ: ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಈ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವರಾದ ಜಮೀರ್ ಅಹ್ಮದ್,​ ಎಂಬಿ ಪಾಟೀಲ್ ಮತ್ತು ಕೆ ಎನ್​ ರಾಜಣ್ಣ, ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್​ ಒಳಗಡೆಯೇ ಕುತಂತ್ರ ನಡೆದಿದೆ.  ಡಿಸಿಎಂ ಡಿಕೆ ಶಿವಕುಮಾರ್​ ದೆಹಲಿಯಲ್ಲಿ ಎಲ್ಲಿಲ್ಲಿ ಓಡಾಡುತ್ತಿದ್ದಾರೆ ಎಂಬುವುದರ ಬಗ್ಗೆ ಮಾಹಿತಿ ಇದೆ. ಡಿ.ಕೆ.ಶಿವಕುಮಾರ್​ ಪರ 70 ಶಾಸಕರು ಇದ್ದಾರೆ ಅಂತ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ಪರ 65 ಶಾಸಕರು ಇದ್ದಾರೆ ಅಂತ ಕಾಂಗ್ರೆಸ್ ​ನವರೇ ಲೆಕ್ಕಾಚಾರ ಹಾಕುತ್ತಿದ್ದಾರೆ ಎಂದರು.

ಐದು ಗ್ಯಾರಂಟಿ ಯೋಜನೆ ಜಾರಿ ಮಾಡುವುದಾಗಿ ಹೇಳಿ ಅಧಿಕಾರಕ್ಕೇರಿರುವ ಕಾಂಗ್ರೆಸ್ ಸರ್ಕಾರ ಈಗ ದಿವಾಳಿ ಆಗಿದೆ. ಯೋಜನೆಗಳನ್ನ ಜಾರಿಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ಯೋಜನೆಗೆ ಹಣ ಕೊಡಲಾಗದೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್​​ ಭವಿಷ್ಯ ನುಡಿದರು.

ಆಪರೇಷನ್ ಕಮಲ, ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರೂ. ಆಫರ್​ ನೀಡಲಾಗುತ್ತಿದೆ ಎಂಬ ಆರೋಪದ ವಿಚಾರವಾಗಿ ಮಾತನಾಡಿದ ಅವರು, ಆಫರ್​ ನೀಡಿದ ಬಗ್ಗೆ ವಿಡಿಯೋ, ಆಡಿಯೋ ಇದ್ದರೇ ಬಹಿರಂಗಪಡಸಲಿ. ಏನೇ ಆರೋಪ ಇದ್ದರೂ ಅದನ್ನು ಬಹಿರಂಗಪಡಿಸಬೇಕು. ಕಾಂಗ್ರೆಸ್​ ನವರು ತಾವೇ ಜಗಳಾಡಿ ಹಾಳಾಗುವಾಗ ನಮ್ಮದೇನು ಕೆಲಸ ಎಂದು ಯತ್ನಾಳ್ ತಿರುಗೇಟು ನೀಡಿದರು.