ಮೈಸೂರು: ಸರಕಾರಿ ನೌಕರಿಗೆ ಕತ್ತರಿಹಾಕಲು ಸರಕಾರ ಕಂಡುಕೊಂಡ ಹೊರಗುತ್ತಿಗೆ ಮಾರ್ಗ ಕೆಲವರ ಜೇಬು ತುಂಬಿಸುತ್ತಿದ್ದು, ಹೊರಗುತ್ತಿಗೆ ಕಾರ್ಮಿಕರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ರಾಜ್ಯಾದ್ಯಂತ ಸಹಸ್ರಾರು ಸಂಖ್ಯೆಯ ಹೊರಗುತ್ತಿಗೆ ನೌಕರರಿದ್ದು, ಆಯಾ ಕೆಲಸಕ್ಕೆ ತಕ್ಕಂತೆ ಸರಕಾರ ವೇತನ, ಭವಿಷ್ಯ ನಿಧಿ ವಂತಿಗೆ ನಿಗದಿಪಡಿಸಿದೆ.
ಗುತ್ತಿಗೆದಾರ ಮತ್ತು ಮೈಸೂರು ವೈದ್ಯಕೀಯ ಕಾಲೇಜು ಮತ್ತು ಅಧೀನ ಆಸ್ಪತ್ರೆಗಳ ಅಧಿಕಾರಿಗಳು ಭಾರಿ ಭ್ರಷ್ಟಾಚಾರದಲ್ಲಿ ಮುಳುಗಿ, ಸರಕಾರದ ನಿಯಮಗಳನ್ನು ಪಾಲಿಸದೆ ಬಡ ಕಾರ್ಮಿಕರನ್ನು ದೋಚುತ್ತಿದ್ದಾರೆ. ಸರಕಾರಿ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಅನ್ಯಾಯದ ಬಗ್ಗೆ ಹೇಳಲು ಹೋದರೆ ನಮ್ಮನ್ನೇ ಗದರಿಸಿ ಕೆಲಸದಿಂದ ತೆಗೆದು ಹಾಕುವ ಬಗ್ಗೆ ಹೆದರಿಸುತ್ತಾರೆ ಎಂದು ಹೊರ ಗುತ್ತಿಗೆಯಲ್ಲಿ ದುಡಿಯುತ್ತಿರುವ ಕೆಲವು ಕಾರ್ಮಿಕರು ನಮ್ಮ “ಸವಾಲ್” ತಂಡದ ಬಳಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಇಡೀ ಮೈಸೂರು, ಹಬ್ಬದ ಸಂಭ್ರಮದಲ್ಲಿ ತೇಲಾಡುತ್ತಿದ್ದರೆ, ಅಧಿಕಾರಿಗಳ ತೀರದ ಭ್ರಷ್ಟಾಚಾರದಿಂದ ಅಮಾಯಾಕ ಕಾರ್ಮಿಕರು ಕೆಲವು ತಿಂಗಳುಗಳಿಂದ ಸಂಬಳವಿಲ್ಲದೆ ದಿನದ ಊಟಕ್ಕು, ಮಕ್ಕಳ ಆರೋಗ್ಯಕ್ಕು ಪರದಾಡುವಂತಾಗಿದೆ. ಕಾರ್ಮಿಕರ ಪಾಲನ್ನು ಅಧಿಕಾರಿಗಳು ಕಮಿಷನ್ ಆಸೆಯಿಂದ ನುಂಗಿ ಗುತ್ತಿಗೆದಾರರನ್ನು ಹಿಂಸಿಸುತ್ತಿದ್ದಾರೆ.
ಕೆಲವು ಸಾಮಾಜಿಕ ಕಾರ್ಯಕರ್ತರು ವರ್ಷಗಳಿಂದ ದೂರು ಸಲ್ಲಿಸಿದರೂ ಕ್ರಮವಹಿಸದೇ ಗುತ್ತಿಗೆದಾರನನ್ನು ಸೇರಿದಂತೆ ಅಮಾಯಕ ಕಾರ್ಮಿಕರನ್ನು ಹಿಂಸಿಸಿ ಕೆ.ಆರ್ ಆಸ್ಪತ್ರೆ, ಚೆಲುವಾಂಬ ಆಸ್ಪತ್ರೆ, ಪಿ.ಕೆ.ಟಿ.ಬಿ ಆಸ್ಪತ್ರೆ ಸೇರಿದಂತೆ ಮೈಸೂರು ವೈದ್ಯಕೀಯ ಕಾಲೇಜುಗಳ ಅಧಿಕಾರಿಗಳು ಭಾರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ.
ತಮಗೆ ಸಂಬಳ ಬರುವುದು ಒಂದು ದಿನ ತಡವಾದರೂ ಸಹಿಸದ ಅಧಿಕಾರಿಗಳು ಬಡ ಕಾರ್ಮಿಕರಿಗೆ ಕೆಲವು ತಿಂಗಳುಗಳಿಂದ ಸಂಬಳ ದೊರೆಯದಿದ್ದರು, ನೋವಿನಲ್ಲಿರುವವರನ್ನು ಹಿಂಸಿಸಿ, ಸರ್ಕಾರಿ ಕೆಲಸವಲ್ಲದೆ ತಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.
ಸಂಪೂರ್ಣ ಸವಲತ್ತುಗಳು ಕೊಡದಿದ್ದರೂ ಪರವಾಗಿಲ್ಲ ಬದುಕಲು ದಿನಸಿ ಖರೀದಿಸಲು ಇದುವರೆವಿಗೂ ಕೊಡುತ್ತಿದ್ದ ಅರ್ಧ ಸಂಬಳವನ್ನಾದರೂ ಕೊಡಿ ಎಂದು ಅಂಗಲಾಚಿ ಬೇಡುತ್ತಿದ್ದಾರೆ. ಎಲ್ಲವನ್ನು ತಿಳಿದಿದ್ದರೂ ಕಾರ್ಮಿಕ ಇಲಾಖೆ ಭ್ರಷ್ಟಾಚಾರಿ ಅಧಿಕಾರಿಗಳಿಗೆ ಬೆಂಗಾವಲಾಗಿ ನಿಂತಿದೆ ಎಂಬ ಆರೋಪವು ಕಾರ್ಮಿಕರಿಂದ ಕೇಳಿ ಬರುತ್ತಿದೆ.
ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಅಮಾಯಕ ಕಾರ್ಮಿಕರನ್ನು ದೋಚುತ್ತಿರುವ ಭ್ರಷ್ಟಾಚಾರಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಂಡು ಕೆ.ಆರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಶೋಭಾ, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ರಾಜೇಂದ್ರ, ಪಿ.ಕೆ.ಟಿ.ಬಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ.ಪ್ರಶಾಂತ್ ಸೇರಿದಂತೆ ಮೈಸೂರು ವೈದ್ಯಕೀಯ ಕಾಲೇಜಿನ ಮುಖ್ಯಸ್ಥರಾದ ಡಾ.ದಾಕ್ಷಾಯಿಣಿ ಸಂಬಳವಿಲ್ಲದೇ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ನ್ಯಾಯ ಒದಗಿಸಬೇಕೆಂದು ಸಾರ್ವಜನಿಕರ ಬೇಡಿಕೆಯಾಗಿದೆ.