ಮೈಸೂರು: ಮತದಾರರ ಪಟ್ಟಿ ನೋಂದಣಿ ಹಾಗೂ ಪರಿಷ್ಕರಣೆಯಲ್ಲಿ ರಾಜಕೀಯ ಪಕ್ಷಗಳ ಸಹಕಾರವೂ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಮತದಾರರ ಪಟ್ಟಿ ವೀಕ್ಷಕರಾದ ಸೆಲ್ವಕುಮಾರ್ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು ಜಿಲ್ಲೆಯ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ಮಾತನಾಡಿ, ಹೆಚ್ಚು ಮತದಾರರು ಇರುವ ಕ್ಷೇತ್ರಗಳಲ್ಲಿ ಎರಡು ಮತಗಟ್ಟೆಗಳನ್ನು ಸ್ಥಾಪಿಸಲು ಹಾಗೂ ಈಗಿರುವ ಮತಗಟ್ಟೆಯ ಪರಿಸ್ಥಿತಿ ಸರಿಯಿಲ್ಲದಿದ್ದರೆ, ಸೂಕ್ತ ಸರ್ಕಾರಿ ಕಟ್ಟಡವನ್ನು ಮತಗಟ್ಟೆಯಾಗಿ ಗುರುತಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಭಾರತ ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಾದ ಪಿರಿಯಾಪಟ್ಟಣದಲ್ಲಿ ಒಟ್ಟು 1,97,60, ಕೃಷ್ಣರಾಜನಗರ ಕ್ಷೇತ್ರದಲ್ಲಿ 2,18,81, ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ 2,44,581, ಹೆಗ್ಗಡದೇವನಕೋಟೆಯ ಕ್ಷೇತ್ರದಲ್ಲಿ 2,27,493, ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ 2,21,428, ಚಾಮುಂಡೇಶ್ವರಿ ಕ್ಷೇತ್ರದಲ್ಲಿ 3,35,677, ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ 2,53,459, ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ 2,50,963, ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ 2,96,014, ವರುಣ ವಿಧಾನಸಭಾ ಕ್ಷೇತ್ರದಲ್ಲಿ 2,36,360 ಟಿ ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ 2,06,657 ಮತದಾರರಿದ್ದು, ಒಟ್ಟು ಮೈಸೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 26,87,773 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.
ವಿಧಾನಸಭಾ ಕ್ಷೇತ್ರಗಳಲ್ಲಿನ ಮತದಾರರ ಪಟ್ಟಿಯನ್ನು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳ ಅಧಿಕೃತ ಜಾಲತಾಣ https://ceo.karnataka.gov.in ನಲ್ಲಿ ಪ್ರಕಟಿಸಲಾಗುತ್ತದೆ. ಸಾರ್ವಜನಿಕರು ತಮ್ಮ ಹೆಸರು ಮತ್ತು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಹಾಗೂ ತಮ್ಮ ವಿವರಗಳನ್ನು ಸರಿಯಾದ ರೀತಿಯಲ್ಲಿ ನೊಂದಾವಣಿ ಆಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.
ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬಹುದು. ಒಂದು ಪಕ್ಷ ಅವರ ಹೆಸರುಗಳು ಕೈ ಬಿಟ್ಟು ಹೋದಲ್ಲಿ ಸಂಬoಧಪಟ್ಟ ಮತದಾರ ನೋಂದಾವಣಿ ಅಧಿಕಾರಿಗಳ ಗಮನಕ್ಕೆ ತಂದು ಹಕ್ಕು ಮತ್ತು ಆಕ್ಷೇಪಗಳ ಸಲ್ಲಿಸುವ ಅವಧಿಯಲ್ಲಿ ಹೆಸರುಗಳನ್ನು ಸೇರ್ಪಡೆ ಮಾಡಿಸಬಹುದು ಎಂದರು.
ಮತದಾರರ ಪಟ್ಟಿಯಲ್ಲಿ ಮೃತ ಮತದಾರರ ಹೆಸರುಗಳು ಉಳಿದುಕೊಂಡಿದ್ದಲ್ಲಿ, ಅದರ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಹೊಂದಿರುವ ಮೃತ ಮತದಾರರ ಕುಟುಂಬದ ಸದಸ್ಯರು ಅಥವಾ ಆ ಬಗ್ಗೆ ಮಾಹಿತಿ ಹೊಂದಿದ ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಬೂತ್ ಮಟ್ಟದ ಏಜೆಂಟ್‌ಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಂತಹ ಮತದಾರರ ಹೆಸರುಗಳನ್ನು ಪ್ರಾಮಾಣಿತ ಕಾರ್ಯನಿರ್ವಹಣಾ ಪದ್ಧತಿಗೆ ಅನುಗುಣವಾಗಿ ಕೈ ಬಿಡಲು ಸಹಕರಿಸಬೇಕು.
ಭಾರತೀಯ ಚುನಾವಣಾ ಆಯೋಗವು 18 ಮತ್ತು 19 ನೇ ವಯಸ್ಸಿನ ಯುವಕ ಯುವತಿಯರು ಹಾಗೂ ಹೆಸರು ನೋಂದಾವಣೆ ಆಗದ ಅರ್ಹ ಮತದಾರರು ಅವರ ಹೆಸರುಗಳನ್ನು ಪ್ರತಿಶತ 100 ರಂತೆ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಮತದಾರರ ನೋಂದಣಿ ವಿಶೇಷ ಆಂದೋಲನ ಕಾರ್ಯಕ್ರಮವನ್ನು ನಂಬರ್ 18 ಮತ್ತು 19 ರಂದು ಮತ್ತು ಡಿಸೆಂಬರ್ 2 ಮತ್ತು 3 ರಂದು ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣ ಕುರಿತಂತೆ 2024 ರ ಜೂನ್ 21 ರಂದು ಮುಕ್ತಾಯಗೊಳ್ಳಲಿದ್ದು, ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಳ್ಳಲು ಅರ್ಹತಾ ದಿನಾಂಕ ನವೆಂಬರ್ 1 ಆಗಿರುತ್ತದೆ. ಮತದಾರರ ಪಟ್ಟಿಯ ನೊಂದಾವಣೆ ಕುರಿತು ಅರ್ಜಿ ಸ್ವೀಕೃತಿ ಸೆಪ್ಟೆಂಬರ್ 30 ರಿಂದ ಪ್ರಾರಂಭವಾಗಿದ್ದು, ನಮೂನೆ 19 ರಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 6 ರಂದು ಕೊನೆಯ ದಿನಾಂಕವಾಗಿದೆ. ಮತದಾರರ ಪಟ್ಟಿಯ ಹಸ್ತಪ್ರತಿ ಸಿದ್ದಪಡಿಸುವಿಕೆ ಹಾಗೂ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 20ರಂದು ಮುದ್ರಿಸಿ, ನವೆಂಬರ್ 23 ರಂದು ಮತದಾರರ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ. ಹಕ್ಕು ಮತ್ತು ಆಕ್ಷೇಪಗಳನ್ನು ನವೆಂಬರ್ 23 ರಿಂದ ಡಿಸೆಂಬರ್ 9 ರವರೆಗೆ ಸಲ್ಲಿಸಬಹುದಾಗಿದ್ದು, ಹಕ್ಕು ಮತ್ತು ಆಕ್ಷೇಪಗಳನ್ನು ಇರ್ತ್ಯರ್ಥ ಪಡಿಸಿ ಪೂರಕ ಪಟ್ಟಿಗಳನ್ನು ಸಿದ್ದಪಡಿಸಿ, ಮುದ್ರಣ ಮಾಡಲು ಡಿಸೆಂಬರ್ 25 ಕೊನೆಯ ದಿನಾಂಕವಾಗಿದೆ. ಡಿಸೆಂಬರ್ 30ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಮಾತನಾಡಿ ಕೆಲವು ಬಾರಿ ಬೂತ್ ಲೆವೆಲ್ ಆಫೀಸರ್ ಗಳನ್ನು ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಅವರು ಅವರಿಗೆ ನಿಯೋಜಿಸಿದ ಮತಗಟ್ಟೆಗಳಲ್ಲಿ ಲಭ್ಯವಿರುವುದಿಲ್ಲ ಆದ್ದರಿಂದ ಮತಗಟ್ಟೆಗೆ ನಿಯೋಜಿಸಿದ ಬಿ ಎಲ್ ಓ ಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಕೆ ಎಂ ಗಾಯತ್ರಿ, ಅಪರ ಜಿಲ್ಲಾಧಿಕಾರಿಗಳಾದ ಲೋಕನಾಥ್, ಮೈಸೂರು ಮಹಾನಗರ ಪಾಲಿಕೆ ಉಪ ಆಯುಕ್ತರಾದ ಡಾ.ಎಂ ದಾಸೇಗೌಡ, ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರಾದ (ಆಡಳಿತ) ಜಿ.ಎಸ್ ಸೋಮಶೇಖರ್, ಕೌನ್ಸಿಲ್ ಕಾರ್ಯದರ್ಶಿಗಳಾದ ಆರ್.ರಂಗಸ್ವಾಮಿ, ಉಪ ವಿಭಾಗಾಧಿಕಾರಿಗಳಾದ ಕೆ. ಆರ್ ರಕ್ಷಿತ್, ರುಚಿ ಬಿಂದಾಲ್, ತಹಶಿಲ್ದಾರ್ ಬಿ.ಎನ್ ಗಿರೀಶ್, ಎಚ್ ಡಿ ಕೋಟೆಯ ತಹಸಿಲ್ದಾರ್ ಸಣ್ಣ ರಾಮಪ್ಪ, ಕಾಂಗ್ರೆಸ್ ಪಕ್ಷದ ಮುಖಂಡರಾದ ಶೌಕತ್, ಪಾಷಾ, ಜೆಡಿಎಸ್ ಪಕ್ಷದ ಫಾಲ್ಕನ್ ಬೋರೇಗೌಡ, ಮೈಸೂರು ಜಿಲ್ಲಾ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿಯಾದ ಪಾಪಣ್ಣ ಹಾಗೂ ಎಚ್.ಪಿ ಚೇತನ್, ವನಿಶ್ ಕುಮಾರ್, ಆಮ್ ಆದ್ಮಿ ಪಕ್ಷದ ರಾಘವ್ ಹಾಜರಿದ್ದರು.