ತನ್ನ ಪಾಯಿಂಟ್ ಆಫ್ ಸೇಲ್ ಟರ್ಮಿನಲ್ ತಂತ್ರಜ್ಞಾನದ ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂದು ಇನ್ನೋವಿಟಿ ಸಲ್ಲಿಸಿದ್ದ ದಾವೆಯನ್ನು ಮಾನ್ಯ ಮಾಡಿ ಪೈನ್ ಲ್ಯಾಬ್ ವಿರುದ್ಧ ವಿಚಾರಣಾಧೀನ ನ್ಯಾಯಾಲಯವು ನೀಡಿದ್ದ ಮಧ್ಯಂತರ ಪ್ರತಿಬಂಧಕಾದೇಶವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ತೆರವುಗೊಳಿಸಿದೆ.
ಹಕ್ಕು ಸ್ವಾಮ್ಯ ದಾವೆಯಲ್ಲಿ ಪಿಒಎಸ್ ಯಂತ್ರಗಳು ಸೇರಿಲ್ಲ.ಅದು ಸಿವಿಎಸ್/ಸರ್ವರ್ ಗೆ ಮಾತ್ರ ಸೀಮಿತವಾಗಿದೆ. ಹೀಗಾಗಿ, ಫಿರ್ಯಾದಿಯು ಹಕ್ಕುಸ್ವಾಮ್ಯವಾಗಿದೆ ಎಂಬುದನ್ನು ಸಾಬೀತುಪಡಿಸಲು ವಿಫಲವಾಗಿದ್ದಾರೆ ಎಂದು ನ್ಯಾಯಮೂರ್ತಿ ಎಸ್ ಆರ್ ಕೃಷ್ಣಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.
ಪಿಒಎಸ್ ಸಾಧನವು ಹಕ್ಕಸ್ವಾಮ್ಯ ದಾವೆಯಲ್ಲಿ ಸೇರಿದೆ ಎಂಬ ವಾದವು ಸಂಪೂರ್ಣವಾಗಿ ತಪ್ಪಾಗಿದ್ದು, ಅದು ವಜಾಕ್ಕೆ ಅರ್ಹವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಫಿರ್ಯಾದಿಯು ಪಿಒಎಸ್ ಸಾಧನಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಹಕ್ಕುಸ್ವಾಮ್ಯ ಹೊಂದಿಲ್ಲ ಅಥವಾ ಕಾನೂನು ರಕ್ಷಣೆ ಪಡೆದಿಲ್ಲ. ಹಕ್ಕುಸ್ವಾಮ್ಯವು ಆ ಸಾಧನದ ಕಾರ್ಯನಿರ್ವಹಣೆಯ ಸರ್ವರ್/ಸಿವಿಎಸ್, ಪ್ರೊಸೆಸರ್, ಅದರ ಮೆಮರಿಗೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಹೇಳಿದೆ.
ದಾವೆಯಲ್ಲಿ ಉಲ್ಲೇಖಿಸಿರುವ ತಂತ್ರಜ್ಞಾನವು ನೂತನ ಮತ್ತು ಆವಿಷ್ಕಾರ ನಿರ್ವಹಣೆ ವಿಭಿನ್ನ ಕ್ಯೂಆರ್ ಕೋಡ್ ಆಧಾರಿತ ಪರಿಹಾರವಾಗಿದ್ದು, ಇದನ್ನು ಬಳಸಿ ಹಾಲಿ ಇರುವ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಪಿಒಎಸ್ ಸಾಧನಗಳಲ್ಲಿ ಯುಪಿಐ ಮತ್ತು ಇತರೆ ಯುಆರ್ ಕೋಡ್ ಆಧಾರಿತ ಹಣರಹಿತ ವಹಿವಾಟನ್ನು ಚಾಲ್ತಿಗೊಳಿಸಬಹುದಾಗಿದೆ ಎಂಬುದು ಫಿರ್ಯಾದಿಯ ವಾದವಾಗಿತ್ತು.