ಮನೆ ಸ್ಥಳೀಯ ರಾಜ್ಯದಲ್ಲಿ ಭ್ರಷ್ಟಾಚಾರದ ಮೆರವಣಿಗೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಎಚ್. ವಿಶ್ವನಾಥ್ ಆರೋಪ

ರಾಜ್ಯದಲ್ಲಿ ಭ್ರಷ್ಟಾಚಾರದ ಮೆರವಣಿಗೆ: ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಎಚ್. ವಿಶ್ವನಾಥ್ ಆರೋಪ

0

ಮೈಸೂರು: ರಾಜ್ಯದಲ್ಲಿ ಭ್ರಷ್ಟಾಚಾರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ಖಂಡಿಸಿದ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್, ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿದರು. ಮಂಗಳವಾರ ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ವಿಶ್ವನಾಥ್ ಮಾತನಾಡುತ್ತಾ, “ಸಿದ್ದರಾಮಯ್ಯ ಯಾವುದನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ಇಡೀ ರಾಜ್ಯವನ್ನು ಹರಾಜು ಹಾಕಿದ್ದಾರೆ. ನೀವೆ ಕಳ್ಳ.. ಬಿಜೆಪಿಯವರನ್ನು ಮಾತ್ರ ಕಳ್ಳ ಎನ್ನುತ್ತೀರಾ?” ಎಂದು ಪ್ರಹಾರ ಮಾಡಿದರು. ಅವರು ವಸತಿ ಮನೆಗಳ ಹಂಚಿಕೆಯಲ್ಲಿನ ಅಕ್ರಮವನ್ನು ಬಹಿರಂಗ ಪಡಿಸಿದರು. “ಆಶ್ರಯ ಸಮಿತಿಯೇ ಪರಮೋಚ್ಚ ಸ್ಥಾನ ಪಡೆದಿದೆ. ಮನೆಗಳು ಈಗ ಶಾಸಕರ ಹಂತದಲ್ಲಿಯೇ ಮಾರಾಟವಾಗುತ್ತಿವೆ. ಕಾಮಗಾರಿಗಳಲ್ಲಿ ಸಚಿವರಿಗೆ ಶೇ.10 ಕಮಿಷನ್ ಹೋಗುತ್ತದೆ, ಕೆಲಸ ಮುಗಿದಾಗ ಇದು ಶೇ.25ಕ್ಕೆ ಏರುತ್ತದೆ,” ಎಂದು ತಿಳಿಸಿದರು.

ಅದೇ ರೀತಿ, ವಸತಿ ಇಲಾಖೆಯಲ್ಲಿನ ಅವ್ಯವಹಾರಗಳನ್ನು ಖಂಡಿಸಿ ಶಾಸಕರು ಬಿ.ಆರ್. ಪಾಟೀಲ್ ಹಾಗೂ ರಾಜುಕಾಗೆ ಕೂಡ ಧ್ವನಿ ಎತ್ತಿರುವುದನ್ನು ಅವರು ಉಲ್ಲೇಖಿಸಿದರು. “ಸಿದ್ದರಾಮಯ್ಯ ಯಾಕೆ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಿಲ್ಲ?” ಎಂಬ ಪ್ರಶ್ನೆ ಎತ್ತಿದರು.

ಮದ್ಯದ ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, “ಬೆಲೆ ಏರಿಸಿದರೆ ಕುಡಿಯೋರು ಕಡಿಮೆಯಾಗುತ್ತಾರೆ ಎಂಬುದು ತಪ್ಪು ಲೆಕ್ಕಾಚಾರ. ಯುವಕರು ಈಗ ಗಾಂಜಾ ಮತ್ತು ಅಫೀಮುಗೆ ಮರುಳಾಗುತ್ತಿದ್ದಾರೆ. ಇದು ಅವರ ಭವಿಷ್ಯ ಹಾಳು ಮಾಡುತ್ತಿದೆ. ಸಿಗರೇಟು ಸೇದುತ್ತಿದ್ದವರು ಈಗ ಗಾಂಜಾ ಸೇವನೆ ಮಾಡುತ್ತಿದ್ದಾರೆ,” ಎಂದು ರಾಜ್ಯದ ಯುವಪೀಳಿಗೆ ಎದುರಿಸುತ್ತಿರುವ ಗಂಭೀರ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಯತ್ನಿಸಿದರು.

ಮೈಸೂರು ದಸರಾ ಉತ್ಸವ ಹಾಗೂ ಅರಮನೆ ನಿರ್ವಹಣೆಯ ಕುರಿತು ಮಾತನಾಡಿದ ವಿಶ್ವನಾಥ್, “ದಸರಾ ಹೈಪವರ್ ಕಮಿಟಿ ಸಭೆ 26ರಂದು ನಡೆಯಲಿದೆ. ಆದರೆ ಅಧಿಕಾರಿಗಳು ಸಿಎಂ ಅವರನ್ನೇ ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅರಮನೆಗೆ ಉಪನಿರ್ದೇಶಕರೇ ಈಗ ನಾಯಕರಾಗಿದ್ದಾರೆ. ಮಹಾರಾಜರಿಗೆ ಅರ್ಹತೆ ನೀಡಬೇಕಾಗಿತ್ತು. ಅರಮನೆ ಮಂಡಳಿಗೆ ನೇಮಕಗೊಂಡಿರುವ ಕೆಎಎಸ್ ಅಧಿಕಾರಿಯನ್ನು ಬದಲಾಯಿಸಬೇಕೆಂಬ ಬೇಡಿಕೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರವಾಸಿಗರ ಟಿಕೆಟ್ ದರ ಹೆಚ್ಚಿಸಲಾಗಿದೆ, ಆದರೆ ಕೇಳುವವರಿಲ್ಲ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಡಾ ಮತ್ತು ಮೈಸೂರು ಅರಮನೆಯ ಪರಿಸ್ಥಿತಿಯ ಕುರಿತು ಅವರು, “ಸಿಎಂ ಕ್ಷೇತ್ರದಲ್ಲೇ ಮುಡಾ ಹಾಳಾಗಿದೆ, ಈಗ ಅರಮನೆ ದಿವಾಳಿಯಾಗಿದೆ. ವಿಶ್ವವಿಖ್ಯಾತ ಮೈಸೂರನ್ನು ಮೂರು ಜನ ಶಿಷ್ಯರ ಮೂಲಕ ನಾಶ ಮಾಡಲಾಗುತ್ತಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, “ಜಿಟಿ ದೇವೇಗೌಡ ಮತ್ತು ಅವರ ಪುತ್ರ ಹರೀಶ್ ಗೌಡ ಸಹಕಾರ ಕ್ಷೇತ್ರದಲ್ಲಿ ಹಳೆಯ ಸ್ಥಾಪಿತರು. ಅವರನ್ನು ಪರಾಜಯಗೊಳಿಸಲು ಸಿದ್ದರಾಮಯ್ಯ ಪ್ಲಾನ್ ಮಾಡುತ್ತಿದ್ದಾರೆ. ಶಾಸಕರು ಸ್ಪರ್ಧಿಸಿದರೆ ಹಣದ ಅಕ್ರಮ ಖರ್ಚು ಹೆಚ್ಚಾಗುತ್ತದೆ,” ಎಂದು ಆರೋಪಿಸಿದರು.

ಅರಮನೆ ಯಾವುದೇ ಕಲೆಕ್ಷನ್ ಮಾಸ್ಟರ್ ಕೈಗೆ ಸಿಲುಕಿದೆ. ಲೂಟಿ ನಿಲ್ಲಿಸಲು ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.”
— ಎಚ್. ವಿಶ್ವನಾಥ್, ಸದಸ್ಯ, ವಿಧಾನ ಪರಿಷತ್