ಮನೆ ರಾಜ್ಯ ಕನ್ನಡ ಭಾಷೆಯಿರುವರೆಗೂ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ನೆನಪು ಶಾಶ್ವತ : ಡಾ. ಕುಮಾರ

ಕನ್ನಡ ಭಾಷೆಯಿರುವರೆಗೂ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ನೆನಪು ಶಾಶ್ವತ : ಡಾ. ಕುಮಾರ

0


ಮಂಡ್ಯ: ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರು ನಮ್ಮನ್ನು ದೈಹಿಕವಾಗಿ ಅಗಲಿರಬಹುದು ಆದರೆ, ಅವರ ಸಾಹಿತ್ಯ ಹಾಗೂ ಕವಿತೆಗಳು ಭಾವಗೀತೆ ಹಾಗೂ ಬರವಣಿಗೆಯಿಂದ ಶಾಶ್ವತವಾಗಿ ನಮ್ಮೊಂದಿಗೆ ಉಳಿದಿದೆ ಎಂದು ಜಿಲ್ಲಾಧಿಕಾರಿ ಡಾ. ಕುಮಾರ ಅವರು ಹೇಳಿದರು.

 ನಗರದ ಕಲಾಮಂದಿರದಲ್ಲಿ ಜೂನ್ 23 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಪು.ತಿ. ನರಸಿಂಹಾಚಾರ್ ಟ್ರಸ್ಟ್ ಮತ್ತು ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ (ರಿ), ಮಂಡ್ಯ, ಇವರ ಸಂಯುಕ್ತಾಶ್ರಯದಲ್ಲಿ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಪುಷ್ಪ ನಮನ, ನುಡಿ ನಮನ, ಗೀತಾನಮನ, ನೃತ್ಯ ನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೆಚ್.ಎಸ್. ವೆಂಕಟೇಶ್ ಮೂರ್ತಿಯವರು ಬದುಕಿದ ಕವಿ ಎಂದರೆ ತಪ್ಪಾಗುವುದಿಲ್ಲ. ಅವರು ತಮ್ಮ ಬರವಣಿಗೆಯಂತೆ ಬದುಕಿದ ಮಹಾನ್ ಕವಿಯಾದರು.ಆಧುನಿಕ ಜಗತ್ತು ಮೊಬೈಲ್ ಸಂಸ್ಕೃತಿಯಲ್ಲಿ ಮುಳುಗಿ ಹೋಗಿದ್ದು, ಭಾವಗೀತೆ ಹಾಗೂ ಸಾಹಿತ್ಯಗಳಲ್ಲಿ ಇಂದಿನ ಯುವ ಪೀಳಿಗೆಗಳು ಆಸಕ್ತಿ ತೋರಬೇಕಾಗಿದೆ. ಸಾಧ್ಯವಾದಷ್ಟು ನಮ್ಮ ಕನ್ನಡದ ಕವಿಗಳ ಬರವಣಿಗೆಗಳ ಮಹತ್ವ ತಿಳಿಯಿರಿ ಎಂದು ಯುವ ಪೀಳಿಗೆಗೆ ಕರೆ ನೀಡಿದರು.

ಅನೇಕ ಭಾವಗೀತೆಗಳನ್ನು ಕನ್ನಡಕ್ಕೆ ನೀಡುರುವ ಅವರ ಸಾಹಿತ್ಯ ಕೊಡುಗೆ ನಿಜಕ್ಕೂ ಅಪಾರ. ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಅಯೋಜಿಸಿದರು ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ಭಾವಗೀತೆಗಳು ಇಲ್ಲವಾದರೆ ಆ ಕಾರ್ಯಕ್ರಮಗಳು ಸಂಪೂರ್ಣವಾಗುವುದಿಲ್ಲ ಅಂತಹ ಅಮೋಘ ಭಾವಗೀತೆಗಳನ್ನು ನೀಡಿರುವ ಅತ್ಯದ್ಭುತ ಕವಿ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಎಂದು ಬಣ್ಣಿಸಿದರು.

ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿಯವರ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದ ನಿವೃತ್ತ ಜಿಲ್ಲಾಧಿಕಾರಿ ಡಾ. ಸಿ. ಸೋಮಶೇಖರ್ ಅವರು ಬಾಲ್ಯದಿಂದಲೇ ಸಾಹಿತ್ಯದ ಮೇಲೆ ಒಲವು ಹೊಂದಿದ್ದ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಅವರು ಮಹಾನ್ ಕವಿ, ವಿಮರ್ಶಕ, ನಾಟಕಕಾರ, ಕಾದಂಬರಿಕಾರ ಹಾಗೂ ಅನುವಾದಕನಾಗಿ ತಮ್ಮನು ತಾವು ರೂಪಿಸಿಕೊಂಡರು ಎಂದು ಬಣ್ಣಿಸಿದರು.

ಬರವಣಿಗೆಯಲ್ಲಿ ಹೊಸ ಅಯಾಮವನ್ನೇ ಸೃಷ್ಟಿಸಿದ ಇವರು “ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ”ಯೆAದು ಎಲ್ಲರ ಚಿಂತನೆಯನ್ನು ತಮ್ಮ ಕಾವ್ಯದ ರಸಧಾರೆಯಿಂದ ದೂರ ಮಾಡಿದ ಶ್ರೇಷ್ಠ ಬರಹಗಾರ ಡಾ. ಹೆಚ್.ಎಸ್. ವೆಂಕಟೇಶಮೂರ್ತಿ ಅವರು ಎಂದು ಹೇಳಿದರು.

ಕವನಗಳು, ಸಾಹಿತ್ಯಗಳು, ಮಕ್ಕಳ ಸಾಹಿತ್ಯ,ಕಾದಂಬರಿ, ಜೀವನ ಚರಿತ್ರೆ, ನಾಟಕಗಳು, ವಿಮರ್ಶೆ, ಅನುವಾದ ಹಾಗೂ ಕನ್ನಡ ಸಾಹಿತ್ಯ ಲೋಕದ ಎಲ್ಲಾ ಪ್ರಕಾರಗಳಲ್ಲಿ ಸಿದ್ದಿಯನ್ನು ಸಾಧಿಸಿದ ಮಹಾನ್ ಸಾಹಿತ್ಯ ಸಂತ ಮತ್ತು ಸಾಹಿತ್ಯ ತಪಸ್ವಿ ಡಾ. ಹೆಚ್.ಎಸ್. ವೆಂಕಟೇಶ್ ಮೂರ್ತಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಪು.ತಿ. ನರಸಿಂಹಾಚಾರ್ ಟ್ರಸ್ಟಿನ ಅಧ್ಯಕ್ಷರಾದ ಪ್ರೊ. ಎಂ. ಕೃಷ್ಣೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಬಿ.ವಿ. ನಂದೀಶ್, ರೆಡ್ ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ, ಕರ್ನಾಟಕ ಸಂಘದ ಅಧ್ಯಕ್ಷ ಡಾ. ಬಿ. ಜಯಪ್ರಕಾಶಗೌಡ, ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷರಾದ ಡಾ. ನಾಗರಾಜು, ಉಪಸ್ಥಿತರಿದ್ದರು.