ಬೆಂಗಳೂರು: ಧರ್ಮೋ ರಕ್ಷತಿ ರಕ್ಷಿತಃ’ ಎನ್ನುವುದರ ಅರಿವು ನನಗೂ ಇದೆ. ಧರ್ಮ ರಕ್ಷಣೆ ಎಂದರೆ ಇನ್ನೊಬ್ಬರ ಅನ್ನ ಕಸಿಯುವುದಲ್ಲ? ನೆಮ್ಮದಿಯ ನಾಡಿಗೆ ಕಿಚ್ಚಿಡುವುದಲ್ಲ? ಮನಸ್ಸುಗಳನ್ನು ಒಡೆದು ದೇಶವನ್ನು ʼಒಡೆದ ಮಡಿಕೆʼ ಮಾಡುವುದಲ್ಲ. ದೇಶವೆಂದರೆ ಮಣ್ಣಲ್ಲ, ಮನುಷ್ಯರು’ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇಂದು ಸರಣಿ ಟ್ವೀಟ್ ಮಾಡಿರುವ ಅವರು, ‘ಕರಪತ್ರಗಳನ್ನು ಹಂಚಿ ಸಮಾಜ ಒಡೆಯುತ್ತಿರುವ ವಿಶ್ವ ಹಿಂದೂ ಪರಿಷತ್, ಬಜರಂಗದಳದ ಬಗ್ಗೆ ನನ್ನ ಹೇಳಿಕೆಯಲ್ಲಿ ಯಾವ ಬದಲಾವಣೆಯೂ ಇಲ್ಲ. ಧರ್ಮ-ಜಾತಿ ಆಧಾರದ ಮೇಲೆ ಜನರನ್ನು ವಿಘಟಿಸುವ ಇಂಥ ಸಂಘಟನೆಗಳ ಕಿಡಿಗೇಡಿಗಳ ಬಗ್ಗೆ ನನ್ನ ನಿಲುವು ಅಚಲ. ‘ಧರ್ಮೋದ್ಧಾರದ ಸೋಗಿನಲ್ಲಿ ಅಶಾಂತಿ’ ಸೃಷ್ಟಿಸುವ ಕೃತ್ಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ’ ಎಂದು ತಿಳಿಸಿದ್ದಾರೆ.
ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ಇದು ವಿಶ್ವ ಹಿಂದೂ ಪರಿಷತ್, ಬಜರಂಗದಳದ ಜಹಗೀರಲ್ಲ. ಇವೇನು ಹಿಂದೂಗಳ ಪ್ರಾತಿನಿಧಿಕ ಸಂಸ್ಥೆಗಳೂ ಅಲ್ಲ. ಒಂದು ರಾಜಕೀಯ ಪಕ್ಷದ ಬಾಲಂಗೋಚಿಗಳಷ್ಟೇ. ಹಿಂದೂ, ಹಿಂದುತ್ವ ಎನ್ನುವ ಪರಂಪರೆ ಇವರ ಗುತ್ತಿಗೆಯಲ್ಲ. ‘ವಿಶ್ವ ಹಿಂದೂ ಪರಿಷತ್, ‘ವಿಶ್ವ ವಿನಾಶಕ ಪರಿಷತ್ʼ ಅಥವಾ ‘ಧರ್ಮ ವಿನಾಶಕ ಪರಿಷತ್ʼ ಆಗುವುದು ಬೇಡ. ಬಜರಂಗದಳ ಭಾವನೆಗಳ ಭಯೋತ್ಪಾದಕ ಆಗುವದು ಬೇಡ. ಹಿಂದೂ ಧರ್ಮದ ನಾಶ ಚಕ್ರವರ್ತಿ, ಸಾಮ್ರಾಟರಿಗೇ ಆಗಲಿಲ್ಲ. ಹಿಂದುತ್ವ ಅಂದೂ ಉಳಿದಿತ್ತು, ಮುಂದೆಯೂ ಉಳಿಯುತ್ತದೆ. ನಿಮ್ಮ ಕಿತಾಪತಿ ಏಕೆ?’ ಎಂದು ಪ್ರಶ್ನಿಸಿದ್ದಾರೆ.
ಧರ್ಮ ರಕ್ಷಣೆ ಎಂದರೆ ಶಿವಮೊಗ್ಗದಲ್ಲಿ ಸಚಿವರೇ 144 ಸೆಕ್ಷನ್ ಉಲ್ಲಂಘಿಸುವುದಾ? ಅವರೇ ನಿಂತು ಹಿಂಸೆಗೆ ಪ್ರಚೋದನೆ ಕೊಡುವುದಾ? ನಾವ್ಯಾರೂ ಹೀಗೆ ಮಾಡಿಲ್ಲ. ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಎಂದು ನೇರವಾಗಿ ಹೇಳಿದ್ದೇನೆ. ಹಿಜಾಬ್ ಗಲಾಟೆ ಹಿಂದಿರುವ ಕಾಣದ ಕೈಗಳಿಗೆ ಕೊಳ ಹಾಕಿ ಎಂದು ಸದನದಲ್ಲೇ ಆಗ್ರಹಿಸಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
‘ನಿಮಗೆ ದೇಶ, ಸಂವಿಧಾನದ ಮೇಲೆ ಗೌರವ ಇಲ್ಲ. ಜನರೆಂದರೆ ನಿಮ್ಮ ಪಾಲಿಗೆ ‘ಭಾವನೆಗಳ ದಾಳಗಳುʼ ಮಾತ್ರ. ನಿಜವಾದ ಹಿಂದೂ ಎಂದೂ ಸಮಾಜ ಒಡೆಯಲಾರ. ‘ಹಿಂದೂ ಎಂದರೆ ಎಲ್ಲರೂ ಒಂದು’ ಎನ್ನುವ ಆದರ್ಶ ಮತ್ತು ಪರಂಪರಾಗತ ನಂಬಿಕೆ. ಈ ನಂಬಿಕೆಯ ಮೇಲೆಯೇ ಭಾರತ ನಿಂತಿದೆ. ಭಾವನೆಗಳನ್ನು ಹೇರಿ ಭಾರತವನ್ನು ಒಡೆಯಲು ನಿಮ್ಮಿಂದ ಸಾಧ್ಯವಿಲ್ಲ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.