ಬೆಳಗಾವಿ: ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಂಗಳವಾರ ತಡರಾತ್ರಿ(ಸೆ. 17) ರಾಣಿ ಚನ್ನಮ್ಮ ವೃತ್ತದಲ್ಲಿ ಯುವಕರ ಮಧ್ಯೆ ದಾಂಧಲೆ ಆಗಿದ್ದು, ಮೂವರು ಯುವಕರ ಮೇಲೆ ಚಾಕು ಇರಿತ ನಡೆಸಲಾಗಿದೆ.
ದರ್ಶನ್ ಪಾಟೀಲ, ಪ್ರವೀಣ ಗುಂಡ್ಯಾಗೋಳ, ಸತೀಶ ಪೂಜಾರಿ ಎಂಬ ಯುವಕರು ಗಂಭೀರವಾಗಿ ಗಾಯಗೊಂಡಿದ್ದು, ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದರಿಂದ ತೀವ್ರ ಅಸ್ವಸ್ಥರಾದ ಯುವಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಭಾರೀ ಜನಸಂದಣಿಯಲ್ಲಿ ಡಾನ್ಸ್ ಮಾಡುತ್ತಿದ್ದ ವೇಳೆ ಕಾಲು ತಗುಲಿತು ಎಂಬ ಕ್ಷುಲ್ಲಕ ಕಾರಣಕ್ಕೆ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.
ಚಾಕುವಿನಿಂದ ದಾಳಿ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ತತ್ ಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ದುಷ್ಕೃತ್ಯ ಎಸಗಿದವರು ಗಾಂಜಾ ಮತ್ತಿನಲ್ಲಿ ಇದ್ದರು ಎಂದು ಹೇಳಲಾಗುತ್ತಿದೆ. ಜಿಲ್ಲಾಸ್ಪತ್ರೆಗೆ ಎಪಿಎಂಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿದ್ದಾರೆ.