ಸಂಪುಟ ದರ್ಜೆ ಸಚಿವನಾಗಿರುವುದರಿಂದ ಶಿಷ್ಟಾಚಾರದ ಕಾರ್ಯಕ್ರಮ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುವುದು ತೀವ್ರ ಅಗತ್ಯವಾಗಿದ್ದು, ಖುದ್ದು ನ್ಯಾಯಾಲಯದ ಮುಂದೆ ಹಾಜರಾಗಲು ಆಗಿಲ್ಲ. ಇದಕ್ಕಾಗಿ ವಿನಾಯಿತಿ ನೀಡುವಂತೆ ಕೋರಿ ವಸತಿ ಸಚಿವ ವಿ ಸೋಮಣ್ಣ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶನಿವಾರ ಮಾನ್ಯ ಮಾಡಿದೆ. ಏಪ್ರಿಲ್ 16ರಂದು ಖುದ್ದು ಹಾಜರಾಗುವಂತೆ ನ್ಯಾಯಾಲಯವು ಸೋಮಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಬೆಂಗಳೂರಿನ ಮೂಡಲಪಾಳ್ಯದ ರಾಮಕೃಷ್ಣ ದೂರಿನ ಹಿನ್ನೆಲೆಯಲ್ಲಿ ಸಚಿವ ಸೋಮಣ್ಣ ವಿರುದ್ಧ ದಾಖಲಾಗಿರುವ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು 110ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹಾಗೂ ಹಾಲಿ ಮತ್ತು ಮಾಜಿ ಶಾಸಕ ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವುದಕ್ಕಾಗಿ ಸ್ಥಾಪಿಸಲಾಗಿರುವ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ ಜಯಂತ್ ಕುಮಾರ್ ಅವರು ನಡೆಸಿದರು.
ವಿಚಾರಣೆ ಆರಂಭವಾಗುತ್ತಿದ್ದಂತೆ ಸಚಿವ ಸೋಮಣ್ಣ ಅವರ ಪರ ಹಿರಿಯ ವಕೀಲರಾದ ಚಂದ್ರಮೌಳಿ ಅವರು ಹಾಜರಾತಿಯಿಂದ ವಿನಾಯಿತಿ ಕೋರಿ ಅಫಿಡವಿಟ್ ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಾಲಯವು ಸೋಮಣ್ಣ ಅವರಿಗೆ ಇಂದು ಹಾಜರಾತಿಯಿಂದ ವಿನಾಯಿತಿ ನೀಡಿದ್ದು, ವಿಚಾರಣೆಯನ್ನು ಜೂನ್ 20ಕ್ಕೆ ಮುಂದೂಡಿತು.
ಮೇಲೆ ಉಲ್ಲೇಖಿಸಿದ ಕಾರಣಕ್ಕಾಗಿ ನ್ಯಾಯಾಲಯದ ಮುಂದೆ ಹಾಜರಾಗಲು ಆಗುತ್ತಿಲ್ಲವೇ ವಿನಾ ನಿರ್ಲಕ್ಷ್ಯದಿಂದ ಅಲ್ಲ. ನ್ಯಾಯಾಲಯ ಆದೇಶಿಸಿದಾಗ ಹಾಜರಾಗಲು ಅಥವಾ ಪೀಠವು ವಿಧಿಸುವ ಷರತ್ತುಗಳಿಗೆ ಬದ್ಧವಾಗಿರುತ್ತೇನೆ. ಒಂದೊಮ್ಮೆ ಇವತ್ತಿನ ಮಟ್ಟಕ್ಕೆ ಹಾಜರಾತಿಯಿಂದ ವಿನಾಯಿತಿ ನೀಡಿದಿದ್ದರೆ ಸರಿಪರಿಸಲಾಗದಷ್ಟು ಸಮಸ್ಯೆಯಾಗುತ್ತದೆ ಎಂದು ಸೋಮಣ್ಣ ಅವರ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗಿದ್ದು, ಸೋಮಣ್ಣನವರು ಮುಗ್ಧರಾಗಿದ್ದಾರೆ. ತಮ್ಮ ಸಮರ್ಥನೆಗೆ ಸೂಕ್ತ ವಿಚಾರಗಳು ಇವೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಸೋಮಣ್ಣ ವಿರುದ್ಧದ ಕ್ರಿಮಿನಲ್ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿತ್ತು. ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ಕೋರುವುದಕ್ಕೆ ಸಂಬಂಧಿಸಿದಂತೆ ಆರೋಪಿ ಸೋಮಣ್ಣ ಅವರು ವಿಚಾರಣಾಧೀನ ನ್ಯಾಯಾಲಯಕ್ಕೆ ಮನವಿ ಸಲ್ಲಿಸಬಹುದು. ಪ್ರಕರಣವು ಹೈಕೋರ್ಟ್‌ನಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು, ವಿಚಾರಣಾಧೀನ ನ್ಯಾಯಾಲಯ ಸದರಿ ಮನವಿಯನ್ನು ನಿರ್ಧರಿಸಬಹುದಾಗಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿತ್ತು.
ಇದಕ್ಕೂ ಮುನ್ನ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸೋಮಣ್ಣ ವಿರುದ್ಧ ವಾರೆಂಟ್ ಜಾರಿ ಮಾಡಿಲ್ಲ. ಪ್ರಕರಣದಲ್ಲಿ ಪ್ರತಿವಾದಿಗಳಾಗಿರದ ಪೊಲೀಸರಿಗೆ ಒಂದೊಮ್ಮೆ ಸೋಮಣ್ಣ ಅವರನ್ನು ಬಂಧಿಸಿದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಿ ಎಂದು ನಿರ್ದೇಶಿಸಲಾಗದು ಎಂದು ಹೇಳಿ, ಸೋಮಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಮನವಿಯನ್ನು ವಜಾ ಮಾಡಿತ್ತು.
ಸೋಮಣ್ಣ ಅವರ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಮತ್ತು ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಸಂಸ್ಥೆ (ಎಸಿಬಿ) ಸಲ್ಲಿಸಿರುವ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ತಿರಸ್ಕರಿಸಿದ್ದು, ಅವರ ವಿರುದ್ಧ ವಿಶೇಷ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ಮಾಡಿತ್ತು. ಅಲ್ಲದೇ, ಏಪ್ರಿಲ್ 16ರಂದು ಖುದ್ದು ಹಾಜರಾಗುವಂತೆ ಸಚಿವ ಸೋಮಣ್ಣ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಸೋಮಣ್ಣ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ 13(1)(ಬಿ) (ಡಿ) ಮತ್ತು (ಇ) ಜೊತೆಗೆ ಸೆಕ್ಷನ್ 13(2)ರ ಅಡಿ ಪ್ರಕರಣ ದಾಖಲಿಸಲು ನ್ಯಾಯಾಲಯವು ಆದೇಶ ಮಾಡಿದೆ.
ಬೆಂಗಳೂರಿನ ಜನತಾ ಬಜಾರ್‌ನಲ್ಲಿ 1974ರಲ್ಲಿ ಮಾರಾಟ ಸಹಾಯಕರಾಗಿ ಕೆಲಸಕ್ಕೆ ಸೇರಿದಾಗ ಸೋಮಣ್ಣ ಅವರ ಮಾಸಿಕ ಸಂಬಳವು 231 ರೂಪಾಯಿಗಳಾಗಿತ್ತು. ಒಟ್ಟು ಹತ್ತು ವರ್ಷದ ಅವಧಿಯಲ್ಲಿ ಸೋಮಣ್ಣ ಅವರ ಆದಾಯವು ₹15,330 ಆಗಿತ್ತು. ನಗರಸಭೆ ಸದಸ್ಯರಾಗಿದ್ದ ಹತ್ತು ವರ್ಷಗಳ ಅವಧಿಯಲ್ಲಿ ಅವರ ಒಟ್ಟು ಆದಾಯವು ಭತ್ಯೆ ಸಹಿತ ₹71,437 ಆಗಿತ್ತು. ಕರ್ನಾಟಕ ಲೋಕಾಯುಕ್ತ ಕಾಯಿದೆ ಅಡಿ ಅವರು ಸ್ವಯಂ ಘೋಷಣೆ ಮಾಡಿಕೊಂಡಿರುವಂತೆ 1993-94 ರಿಂದ 2009-10ರ ಅವಧಿಯಲ್ಲಿ ಅವರ ಆಸ್ತಿಯು ₹18,49,89,441 ಆಗಿದೆ. ಸುಮಾರು ₹12.42 ಕೋಟಿ ಅಕ್ರಮ ಆಸ್ತಿ ಕಂಡುಬಂದಿದೆ. ಈ ಅಕ್ರಮ ಆಸ್ತಿಯ ಪ್ರಮಾಣ ಶೇ. 204 ಆಗಿದೆ ಎಂಬುದು ಅರ್ಜಿದಾರರ ಆರೋಪವಾಗಿದೆ.