ಮನೆ ಸುದ್ದಿ ಜಾಲ ಮೃತ ಗುತ್ತಿಗೆದಾರನ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ: ಭಾಸ್ಕರ್‌ ರಾವ್

ಮೃತ ಗುತ್ತಿಗೆದಾರನ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ: ಭಾಸ್ಕರ್‌ ರಾವ್

0

ಬೆಳಗಾವಿ: ಕೆ.ಎಸ್. ಈಶ್ವರಪ್ಪ ವಿರುದ್ದ ​​ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್​​ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ ಎಂದು ಆಪ್ ಮುಖಂಡ ಭಾಸ್ಕರ್‌ ರಾವ್ ಹೇಳಿದರು.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪ ಹಾಗೂ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಸಂತೋಷ ಪಾಟೀಲ್​​ ಕೆಲಸ ಮಾಡಿದ್ದನು‌. ಆದರೆ ಮಾಜಿ ಸಚಿವರು ಬಿಲ್ ಮಂಜೂರು ಮಾಡಲು ಕಾಯಿಸುವ ಜತೆಗೆ ಸಂತೋಷ ಪಾಟೀಲ್​​ ಅವರನ್ನು ಅವಮಾನ ಮಾಡಿದರು. ಇದೇ ಗುತ್ತಿಗೆದಾರನ ಆತ್ಮಹತ್ಯೆಗೆ ಕಾರಣವಾಯಿತು ಎಂದು ಆರೋಪಿಸಿದರು.

ಎರಡು ರಾಷ್ಟ್ರೀಯ ಪಕ್ಷಗಳಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಮಗಾರಿ ಪ್ರಾರಂಭವಾದ ಬಳಿಕವಾದರೂ ಹಣ ಬಿಡುಗಡೆ ಮಾಡಿಸಬೇಕಿತ್ತು. ಆದರೀಗ ಮೊಸಳೆ ಕಣ್ಣೀರು ಸುರಿಸುವುದನ್ನು ಎರಡು ಪಕ್ಷಗಳು ಬಿಡಬೇಕು. ನಾವು ಪಕ್ಷಗಳ ದುರಾಡಳಿತ, ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತೇವೆ. ಭ್ರಷ್ಟಾಚಾರದಿಂದ ನೇರವಾಗಿ ಜನರ ಮೇಲೆ ಪರಿಣಾಮ ಬೀರಲಿದೆ. ಸಂತೋಷ್ ಪಾಟೀಲ್ ಮನವಿ ಮಾಡಿದ್ದಾಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು. ಸಂತೋಷ ಪಾಟೀಲ್ ಕೊಟ್ಟಿದ್ದ ಮನವಿ ಇಂದು ಕೂಡ ವಿಚಾರಣೆ ಆಗಿಲ್ಲ. ನಾವು ಅಥವಾ ನೀವು ಯಾರಾದರೂ ಅಪರಾಧ ಮಾಡಿದ್ದರೆ ಇಷ್ಟೊತ್ತಿಗೆ ಹಿಂಡಲಗಾ ಜೈಲಿನಲ್ಲಿ ಇರುತ್ತಿದ್ದೆವು ಎಂದರು.

ಇನ್ನು ಎಫ್​​ಐಆರ್​ನಲ್ಲಿರುವ ಆರೋಪಿಗಳ ಬಂಧನ ಆಗಬೇಕು ಎಂದು ಆಗ್ರಹಿಸುತ್ತೇನೆ. ಇಂತಹ ಪ್ರಕರಣದಲ್ಲಿ ಸರ್ಕಾರವೇ ತನಿಖಾ ಅಧಿಕಾರಿ ಆಗುತ್ತಿದೆ. ಪೊಲೀಸರು ಇಂತಹ ಪ್ರಕರಣಲ್ಲಿ ತನಿಖಾಧಿಕಾರಿಗಳು ಆಗದಿರುವುದು ಬೇಸರದ ಸಂಗತಿ. ಕೋರ್ಟ್ ಮಧ್ಯಸ್ಥಿಕೆಯಲ್ಲಿ ಇದರ ತನಿಖೆ ಆಗಬೇಕು. ಸಂತೋಷ ಪಾಟೀಲ್​​ ಅವರ ಸಾಲ ಮುಟ್ಟಿಸುತ್ತೇವೆ ಎಂದು ಒಬ್ಬರು ಹೇಳಿಲ್ಲ. ಸಿಐಡಿಗೆ ಕೊಟ್ಟಿರುವ ಕೇಸ್‌ಗಳು ಏನಾಗಿದೆ ಎಂಬುದು ನಿಮಗೆಲ್ಲ ಗೊತ್ತಿದೆ. ಪೊಲೀಸ್ ಇಲಾಖೆ ಅಸಹಾಯಕ ಏನಲ್ಲ. ಆದರೆ ಅವರು ಹೇಳಿದ ಹಾಗೆ ಪೊಲೀಸರು ಕೇಳುತ್ತಿದ್ದಾರೆ ಎಂದು ಭಾಸ್ಕರ್​​ ರಾವ್​​ ದೂರಿದರು.

ಹಿಂದಿನ ಲೇಖನಮಕ್ಕಳಿಗೆ ಪೋಷಕರು, ಅಜ್ಜ-ಅಜ್ಜಿಯರ ಪ್ರೀತಿ ವಾತ್ಸಲ್ಯ ಪಡೆಯುವ ಹಕ್ಕಿದೆ: ಬಾಂಬೆ ಹೈಕೋರ್ಟ್
ಮುಂದಿನ ಲೇಖನಸಚಿವ ಸೋಮಣ್ಣಗೆ ಹಾಜರಾತಿಯಿಂದ ವಿನಾಯಿತಿ ನೀಡಿದ ಜನಪ್ರತಿನಿಧಿಗಳ ನ್ಯಾಯಾಲಯ