ನವದೆಹಲಿ: ಕೋವಿಡ್–19 ಪ್ರಕರಣಗಳು ಏರಿಕೆಯಾಗದಂತೆ ತಡೆಯಲು ದೆಹಲಿ ಸರ್ಕಾರ ಎಚ್ಚರ ವಹಿಸಿದೆ. ಎಂತಹದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಲ್ಲಿ ದೆಹಲಿಯಲ್ಲಿ ಮೂರು ಮಂದಿ ಕೋವಿಡ್’ನಿಂದಾಗಿ ಮೃತಪಟ್ಟಿದ್ದಾರೆ. ಈ ಮೂವರೂ ಗಂಭೀರ ಆರೋಗ್ಯ ಸಮಸ್ಯೆಗಳಿಂದಲೂ ಬಳಲುತ್ತಿದ್ದರು ಎಂದು ಅವರು ಹೇಳಿದ್ದಾರೆ.
ಶುಕ್ರವಾರ ಅಧಿಕಾರಿಗಳೊಂದಿಗೆ ಕೋವಿಡ್ ಪರಿಸ್ಥಿತಿ ಅವಲೋಕನ ಸಭೆ ನಡೆಸಿದ ಬಳಿಕ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದಿದ್ದಾರೆ.
ದೆಹಲಿ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ರಾಜಧಾನಿಯಲ್ಲಿ ಶೇ.12.48ರಷ್ಟು ಕೋವಿಡ್ ಪಾಸಿಟಿವಿಟಿ ದರದೊಂದಿಗೆ 295 ಹೊಸ ಪ್ರಕರಣಗಳು ಗುರುವಾರ ವರದಿಯಾಗಿವೆ.
ಬುಧವಾರ ಪಾಸಿಟಿವಿಟಿ ದರ 13.89ಕ್ಕೆ ತಲುಪಿತ್ತು. 300 ಹೊರ ಪ್ರಕರಣಗಳು ಪತ್ತೆಯಾಗಿದ್ದವು. ಸೋಂಕಿನಿಂದಾಗಿ ಇಬ್ಬರು ಮೃತಪಟ್ಟಿದ್ದರು. 2022ರ ಆಗಸ್ಟ್ 31ರ ಬಳಿಕ ದಿನವೊಂದರದಲ್ಲಿ ಇಷ್ಟು (300ಕ್ಕಿಂತ ಹೆಚ್ಚು) ಪ್ರಕರಣಗಳು ವರದಿಯಾಗಿರಲಿಲ್ಲ.