ಮನೆ ಕಾನೂನು ವಿಧವೆಯ ಮರು ವಿವಾಹದ ಆಧಾರದಲ್ಲಿ ಮೋಟಾರು ವಾಹನ ಕಾಯಿದೆ ಅಡಿ ಪರಿಹಾರ ನಿರಾಕರಿಸಲಾಗದು: ಬಾಂಬೆ ಹೈಕೋರ್ಟ್

ವಿಧವೆಯ ಮರು ವಿವಾಹದ ಆಧಾರದಲ್ಲಿ ಮೋಟಾರು ವಾಹನ ಕಾಯಿದೆ ಅಡಿ ಪರಿಹಾರ ನಿರಾಕರಿಸಲಾಗದು: ಬಾಂಬೆ ಹೈಕೋರ್ಟ್

0

ವಿಧವೆಯ ಮರು ವಿವಾಹವು ಮೋಟಾರು ವಾಹನ ಕಾಯಿದೆ ಅಡಿ ಆಕೆಗೆ ಪರಿಹಾರ ನಿರಾಕರಿಸಲು ಆಧಾರವಾಗದು ಎಂದು ಈಚೆಗೆ ಬಾಂಬೆ ಹೈಕೋರ್ಟ್ ಹೇಳಿದೆ.

 [ಇಫ್ಕೊ ಟೊಕಿಯೊ ಜನರಲ್ ಇನ್ಯೂರೆನ್ಸ್ ಕಂಪೆನಿ ವರ್ಸಸ್ ಭಾಗ್ಯಶ್ರೀ ಗಾಯಕ್ವಾಡ್].

ವಿಧವೆಯು ಮರು ಮದುವೆಯಾದರೆ ಆಕೆಯ ಮೊದಲ ಪತಿ ಸಾವನ್ನಪ್ಪಿದ ಕಾರಣದಿಂದ ಆಕೆಗೆ ದೊರೆಯಬೇಕಾದ ಪರಿಹಾರ ನಿರಾಕರಿಸಬೇಕು ಎಂಬ ವಿಮಾ ಕಂಪೆನಿಯ ವಾದವನ್ನು ನ್ಯಾಯಮೂರ್ತಿ ಎಸ್ ಜಿ ಡಿಗೆ ಅವರ ನೇತೃತ್ವದ ಏಕಸದಸ್ಯ ಪೀಠವು ತಳ್ಳಿಹಾಕಿದೆ.

“ಪರಿಹಾರ ಪಡೆಯಲು ವಿಧವೆ, ವಿಧವೆಯಾಗಿಯೇ ಉಳಿಯಬೇಕು ಅಥವಾ ಪರಿಹಾರ ಪಡೆಯುವವರೆಗೆ ಹಾಗೆಯೇ ಇರಬೇಕು ಎಂದು ಯಾರು ಬಯಸಲಾಗದು. ಆಕೆಯ ವಯಸ್ಸಿನ ಪರಿಗಣನೆ ಮತ್ತು ಅಪಘಾತದ ಸಂದರ್ಭದಲ್ಲಿ ಆಕೆ ಮೃತರ ಪತ್ನಿಯಾಗಿದ್ದಳು ಎನ್ನುವುದು ಆಕೆ ಪರಿಹಾರ ಪಡೆಯಲು ಅರ್ಹಳು ಎನ್ನುವುದಕ್ಕೆ ಸಾಧಾರವಾಗುತ್ತದೆ. ಪತಿಯ ಮರಣಾನಂತರ ಮರು ಮದುವೆಯು ಪರಿಹಾರ ಪಡೆಯಲು ನಿಷೇಧವಾಗುವುದಿಲ್ಲ ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

“ಥಾಣೆ ಜಿಲ್ಲೆಯ ವ್ಯಾಪ್ತಿಯ ಹೊರಗೆ ಆಕ್ಷೇಪಾರ್ಹ ರಿಕ್ಷಾವನ್ನು ಓಡಿಸುವುದು ಪರವಾನಗಿಯ ನಿಯಮಗಳ ಉಲ್ಲಂಘನೆಯಾಗಿದೆ ಎಂದಾಗಲಿ, ವಿಮಾ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಸಾಬೀತುಪಡಿಸಲಾಗಲಿ ಕಂಪೆನಿಯು ಯಾವುದೇ ಸಾಕ್ಷಿಯನ್ನು ಪರಿಶೀಲಿಸಿಲ್ಲ. ಹಾಗಾಗಿ ವಿಮಾ ಪಾಲಿಸಿಯ ಷರತ್ತು, ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂಬ ವಾದದಲ್ಲಿ ಹುರುಳಿಲ್ಲ” ಎಂದು ನ್ಯಾಯಾಲಯ ಹೇಳಿದೆ.

2010ರ ಅಪಘಾತದಲ್ಲಿ ಸಾವನ್ನಪ್ಪಿದ ಗಣೇಶ್ ಪತ್ನಿಗೆ ಪರಿಹಾರ ವಿತರಿಸಲು ಮೋಟಾರು ಅಪಘಾತಗಳ ಪರಿಹಾರ ನ್ಯಾಯ ಮಂಡಳಿಯು (ಎಂಎಸಿಟಿ) ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಇಫ್ಕೊ ಟೋಕಿಯೊ ಜನರಲ್ ಇನ್ಶೂರೆನ್ಸ್ ಕಂಪೆನಿಯು ಮೇಲ್ಮನವಿ ಸಲ್ಲಿಸಿತ್ತು.

ಮಹಿಳೆಯ ಪತಿ ಗಣೇಶ್ ಅವರು ಬೈಕ್ನಲ್ಲಿ ಹಿಂಬದಿ ಸವಾರರಾಗಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆಟೊರಿಕ್ಷಾದ ನಿರ್ಲಕ್ಷ ಚಾಲನೆಯಿಂದಾಗಿ ಬೈಕ್ಗೆ ಡಿಕ್ಕಿಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಗಣೇಶ್ ಸಾವನ್ನಪ್ಪಿದ್ದರು. ಗಣೇಶ್ ಸಾವನ್ನಪ್ಪುವ ಸಂದರ್ಭದಲ್ಲಿ ಮಹಿಳೆಗೆ 19 ವರ್ಷವಾಗಿತ್ತು. ಆನಂತರ ಆಕೆಯು ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಆಕೆ ಮರು ವಿವಾಹವಾಗಿದ್ದರು.

ಸಂತ್ರಸ್ತೆಯು ಮರುವಿವಾಹವಾಗಿರುವುದು ಹಾಗೂ ಥಾಣಾ ಜಿಲ್ಲೆಯ ವ್ಯಾಪ್ತಿಯನ್ನು ಉಲ್ಲಂಘಿಸಿ ಆಟೋ ಚಾಲನೆ ಮಾಡಿರುವುದು ಈ ಎರಡು ಅಂಶಗಳನ್ನು ಉಲ್ಲೇಖಿಸಿ ವಿಮಾ ಕಂಪೆನಿಯು ಪರಿಹಾರ ನಿರಾಕರಿಸಿತ್ತು. ಆದರೆ, ಇವೆರಡೂ ವಾದಗಳನ್ನು ನ್ಯಾಯಾಲಯ ತಿರಸ್ಕರಿಸಿದೆ.

ಹಿಂದಿನ ಲೇಖನಕೋವಿಡ್ -19: ಎಂತಹದೇ ಪರಿಸ್ಥಿತಿ ಎದುರಿಸಲು ದೆಹಲಿ ಸಿದ್ದ- ಅರವಿಂದ ಕೇಜ್ರಿವಾಲ್‌
ಮುಂದಿನ ಲೇಖನಬೇಸಿಗೆಯ ದಾಹ ತಣಿಸಿ, ದೇಹಕ್ಕೆ ತಂಪು ನೀಡುವ ಜ್ಯೂಸ್’ಗಳು