ಮನೆ ಕಾನೂನು ಗೋವು ಕಳ್ಳಸಾಗಣೆಯಿಂದ ಧಾರ್ಮಿಕ ಭಾವನೆಗಳಿಗೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ: ಕಾಶ್ಮೀರ ಹೈಕೋರ್ಟ್

ಗೋವು ಕಳ್ಳಸಾಗಣೆಯಿಂದ ಧಾರ್ಮಿಕ ಭಾವನೆಗಳಿಗೆ, ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ: ಕಾಶ್ಮೀರ ಹೈಕೋರ್ಟ್

0

ಹಸು ಕರುಗಳನ್ನು ಕಳ್ಳಸಾಗಣೆ ಮಾಡುವುದರಿಂದ  ಧಾರ್ಮಿಕ ಭಾವನೆಗಳಿಗೆ ಹಾಗೂ ಆ ಮೂಲಕ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂದು ಈಚೆಗೆ ತಿಳಿಸಿರುವ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಜಾನುವಾರು ಕಳ್ಳಸಾಗಣೆ ಆರೋಪಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಆದೇಶ ಎತ್ತಿ ಹಿಡಿದಿದೆ.

Join Our Whatsapp Group

ಬಂಧಿತ ಶಕೀಲ್ ಮೊಹಮ್ಮದ್‌ನ ವಿರುದ್ಧ ಆರೋಪ ಹೊರಿಸಲಾದ ಚಟುವಟಿಕೆಗಳು (ಜಾನುವಾರು ಕಳ್ಳಸಾಗಾಣಿಕೆ) ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉಂಟುಮಾಡುವುದು ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಬೆದರಿಕೆ ಒಡ್ಡುತ್ತದೆ ಎಂದು ನ್ಯಾಯಮೂರ್ತಿ ಮೋಕ್ಷಾ ಖಜುರಿಯಾ ಕಜ್ಮಿ ವಿವರಿಸಿದರು.

ಹಸು ಮತ್ತು ಕರುಗಳು ಗೋವುಗಳಾಗಿದ್ದು ಅವುಗಳನ್ನು ಕೇವಲ ವಧೆಯ ಉದ್ದೇಶಕ್ಕಾಗಿ ಅಕ್ರಮ ಕಳ್ಳಸಾಗಣೆ ಮಾಡುತ್ತಿರುವುದನ್ನು ಸಮುದಾಯವೊಂದು ನೋಡುತ್ತ ಬಂದಿದ್ದು ಅಂತಹ ಕೃತ್ಯ ತನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಆ ಸಮುದಾಯಕ್ಕೆ ಸೇರಿದ ಜನ ಭಾವಿಸುತ್ತಾರೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಆರೋಪಿಯನ್ನು ಬಂಧಿಸುವುದು ಸಮರ್ಥನೀಯ ಎಂಬುದಾಗಿ ನ್ಯಾಯಾಲಯ ಹೇಳಿದೆ.

ಗೋವುಗಳ ಅಕ್ರಮ ಕಳ್ಳಸಾಗಣೆಗೆ ಸಂಬಂಧಿಸಿದಂತೆ ವಿವಿಧ ಎಫ್‌ಐಆರ್‌ಗಳು ದಾಖಲಾಗಿರುವಾತನ ಕೃತ್ಯಗಳು ಸಮುದಾಯದ ಪ್ರಸ್ತುತ ಬದುಕಿಗೆ ಧಕ್ಕೆ ತರುವ ಸಾಧ್ಯತೆಗಳಿದ್ದು ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯನ್ನು ಉಂಟುಮಾಡುವುದು ಮಾತ್ರವಲ್ಲದೆ ಈ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಬೆದರಿಕೆ ಒಡ್ಡುತ್ತದೆ ಎಂದು  ಅದು ತಿಳಿಸಿದೆ.

2024 ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆಯಡಿಯಲ್ಲಿ ಶಕೀಲ್‌ನನ್ನು ಬಂಧಿಸಲಾಗಿತ್ತು. ನಂತರ ಮುಂಜಾಗ್ರತಾ ಕ್ರಮವಾಗಿ ಬಂಧನ ನಡೆದಿರುವುದನ್ನು ಪ್ರಶ್ನಿಸಿ ಆತನ ತಾಯಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಆತನನ್ನು ಬಂಧಿಸುವ ಬದಲು ದೇಶದ ಸಾಮಾನ್ಯ ಕಾನೂನುಗಳನ್ನು ಅನ್ವಯಿಸಿದ್ದರೆ ಸಾಕಿತ್ತು. ಮುಂಜಾಗ್ರತಾ ಕ್ರಮವಾಗಿ ಬಂಧನ ಆದೇಶ ಕಾನೂನಿನ ಪ್ರಕ್ರಿಯೆಯ ಸಂಪೂರ್ಣ ದುರುಪಯೋಗ ಎಂದು ತಾಯಿ ಪರ ವಕೀಲರು ವಾದಿಸಿದ್ದರು.

ಶಕೀಲ್‌ ಗೋವು ಕಳ್ಳಸಾಗಣೆ ಸೇರಿದಂತೆ ವಿವಿಧ ಕ್ರಿಮಿನಲ್‌ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಆತ ಶಾಂತಿ ಪ್ರಿಯ ಜನರ ನಡುವೆ ಭಯೋತ್ಪಾದನೆಗೆ ಮುಂದಾಗಿದ್ದ. ಆತನ ಸಮಾಜವಿರೋಧಿ ಚಟುವಟಿಕೆಗಳು ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಮಾರಕ ಎಂದು ಸರ್ಕಾರ ಪ್ರತಿವಾದ ಮಂಡಿಸಿತ್ತು.

ಮುಂಜಾಗರೂಕತಾ ಬಂಧನಕ್ಕೆ ಸಂಬಂಧಸಿದಂತೆ ಪೂರಕ ಅಂಶಗಳು ಎನ್ನುವುದು ಬಂಧಿತನ ಕೃತ್ಯಗಳ ಸ್ವರೂಪವಾಗಿರದೆ ಅಂತಹ ಅಂಶಗಳು ಸಾಮುದಾಯಿಕ ಜೀವನ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯಿಂದ ಕೂಡಿರುತ್ತದೆ ಎಂದು ಆರ್ ಕಲಾವತಿ ಮತ್ತು ತಮಿಳುನಾಡು ಸರ್ಕಾರ ನಡುವಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 2006ರಲ್ಲಿ ನೀಡಿದ್ದ ತೀರ್ಪನ್ನು ಪೀಠ ಅವಲಂಬಿಸಿತು. ಅ ಮೂಲಕ ಶಕೀಲ್‌ನ ವಿರುದ್ಧ ಆರೋಪಿಸಲಾದ ಚಟುವಟಿಕೆಗಳಿಗೆ ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಸಾಮರ್ಥ್ಯ ಇದೆ ಎಂದು ತಿಳಿಸಿ ಆರೋಪಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತು.