ಮನೆ ಸ್ಥಳೀಯ ನಗರ ಪ್ರದೇಶದ ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸಿ: ವಸ್ತ್ರದ್

ನಗರ ಪ್ರದೇಶದ ಮತದಾನ ಹೆಚ್ಚಳಕ್ಕೆ ಜಾಗೃತಿ ಮೂಡಿಸಿ: ವಸ್ತ್ರದ್

0

ಮೈಸೂರು: ಕಳೆದ ಚುನಾವಣೆಯಲ್ಲಿ ಮೈಸೂರು ನಗರ ವ್ಯಾಪ್ತಿಯ ಚಾಮರಾಜ, ನರಸಿಂಹರಾಜ ಹಾಗೂ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕೆಲ ಮತಗಟ್ಟೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳಕ್ಕೆ ಅಧಿಕಾರಿಗಳು ಕಾರ್ಯತಂತ್ರ ರೂಪಿಸಿಕೊಳ್ಳಬೇಕೆಂದು ರಾಜ್ಯ ಚುನಾವಣಾ ಸ್ವೀಪ್ ನೋಡಲ್ ಅಧಿಕಾರಿ ವಸ್ತ್ರದ್ ಹೇಳಿದರು.

ಜಿ.ಪಂ.ದೇವರಾಜ ಅರಸು ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ನಗರದ ಕೆಲ ಮತಗಟ್ಟೆಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಮತದಾನವಾಗಿದ್ದು ಆ ಭಾಗಗಳ ಕೊರತೆಗಳನ್ನು ಗಮನಿಸುವುದರೊಂದಿಗೆ ಸ್ವೀಪ್ ಚಟುವಟಿಕೆಗಳನ್ನು ಹೆಚ್ಚಾಗಿ ಕೈಗೊಳ್ಳುವ ಮೂಲಕ ಮತದಾನ ಪ್ರಮಾಣ ವೃದ್ದಿಗೆ ಅಧಿಕಾರಿಗಳು ಮುಂದಾಗಬೇಕು ಹಾಗೂ ಸಂಭಂಧಿಸಿದ ಅಧಿಕಾರಿಗಳು ಹಿಂದಿನ ಚುನಾವಣೆಯಲ್ಲಿ ಕಡಿಮೆ ಪ್ರಮಾಣದ ಮತದಾನವಾಗಿರುವ ಸ್ಥಳಗಳಿಗೆ ತೆರಳಿ ಸಮಗ್ರವಾಗಿ ಪರಿಶೀಲಿಸಿ 10 ದಿನದೊಳಗಾಗಿ ವರದಿ ನೀಡಬೇಕೆಂದರು.

ಚುನಾವಣಾ ಆಯೋಗದ ಟೋಲ್ ಫ್ರೀ ನಂಬರ್ 1950 ನ್ನು ಎಲ್ಲೆಡೆ ಪ್ರಚಾರ ಮಾಡುವ ಮೂಲಕ ಮತದಾರರ ಯಾವುದೇ ತೊಂದರೆಗೆ ಅನುಕೂಲವಾಗುವಂತೆ ಪ್ರಚುರಪಡಿಸಿ ಹಾಗೂ ವೋಟರ್ ಹೆಲ್ಪ್ ಲೈನ್ ಮಾಹಿತಿಯನ್ನು ಹೆಚ್ಚು ಪ್ರಚುರಪಡಿಸಿ ಎಂದರು.

ಅಂಚಿನಲ್ಲಿರುವ ( ಮಾರ್ಜಿನಲ್) ಮತದಾರರುಗಳಾದ ವಿಕಲಚೇತನರು,ಲೈಂಗಿಕ ಕಾರ್ಯಕರ್ತರು, ಕುಷ್ಟರೋಗದಿಂದ ಗುಣಮುಖರಾದವರು, ಲಿಂಗ ಅಲ್ಪಸಂಖ್ಯಾತರು ಮುಂತಾದವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ನೋಂದಾವಣೆಗೊಳ್ಳುವಂತೆ ನೋಡಿಕೊಳ್ಳಿ ಎಂದರು.

18 ವರ್ಷ ಪೂರೈಸಿರುವವರು ಮತದಾರರ ಪಟ್ಟಿಗೆ ತಮ್ಮ ಹೆಸರು ಸೇರ್ಪಡೆಗೊಳಿಸುವುದು ಹಾಗೂ ಪಟ್ಟಿಯಲ್ಲಿ ಹೆಸರಿರುವವರು ಮತದಾನ ಮಾಡುವಂತೆ ನೋಡಿಕೊಳ್ಳುವುದು ಮತ್ತು 17 ವರ್ಷ ಪೂರೈಸಿರುವವರು ವರ್ಷದಲ್ಲಿ 4 ಬಾರಿ ಮತದಾರರ ಪಟ್ಟಿಗೆ ಸೇರಲು ಅವಕಾಶವಿದ್ದು ಮಹಿಳಾ ಮತದಾರರೂ ಹೆಚ್ಚಿನ ಪ್ರಮಾಣದಲ್ಲಿ ಮತದಾರರ ಪಟ್ಟಿಗೆ ನೋಂದಾಯಿಸಿಕೊಳ್ಳುವಂತೆ ನೋಡಿಕೊಳ್ಳಬೇಕೆಂದರು.

ವಿ.ಹೆಚ್.ಎ ಆಪ್ ಬಳಸುವುದರಿಂದ ಅಭ್ಯರ್ಥಿಗಳ ಮಾಹಿತಿ, ಇವಿಎಂ ಬಗೆಗಿನ ಮಾಹಿತಿ ಹಾಗೂ ಆಯೋಗ ಹೇಗೆ ಕೆಲಸ ಮಾಡುತ್ತದೆ ಎಂಬ ಬಗೆಗೆ ಮಾಹಿತಿ ತಿಳಿದುಕೊಳ್ಳಬಹುದಾಗಿದೆ, ಆಯೋಗ ಸಿದ್ದಪಡಿಸಿರುವ ಹಿಂದಿ ಅವತರಣಿಕೆಯ ಮೆ ಭಾರತ್ ಹೂ ಹಾಗೂ ಕನ್ನಡದ ನಾ ಭಾರತ, ಭಾರತ ನನ್ನಲ್ಲಿ, ನಾ ಜಾಗೃತ,ಜಾಗೃತಿ ನನ್ನಲ್ಲಿ ಎಂಬ ಹಾಡನ್ನು ಎಲ್ಲೆಡೆ ಪ್ರಚುರಪಡಿಸಿ ಮತದಾನದಲ್ಲಿ ಎಲ್ಲರೂ ಭಾಗವಹಿಸುವಂತೆ ನೋಡಿಕೊಳ್ಳಿ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ಅಶಾದ್ ಉರ್ ರೆಹಮಾನ್ ಶರೀಪ್,ಜಿ.ಪಂ.ಉಪಕಾರ್ಯದರ್ಶಿ ಕೃಷ್ಣಂ ರಾಜು,ಮಾಸ್ಟರ್ ಟ್ರೈನರ್ ಶಾಂತ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸುರೇಶ್, ಚುನಾವಣಾ ಶಿರಸ್ತೆದಾರ್ ಸುರೇಶ್ ಹಾಗೂ ಅಧಿಕಾರಿಗಳು ಇದ್ದರು.

ಹಿಂದಿನ ಲೇಖನಅಳಿಯನ‌ ಮೇಲೆ ಕಾರು ಹಾಯಿಸಲು ಹೋಗಿ, ಪಾದಚಾರಿಗಳಿಗೆ ಡಿಕ್ಕಿ: ಐವರಿಗೆ ಗಾಯ
ಮುಂದಿನ ಲೇಖನಮೋದಿಯವರಷ್ಟು ಸುಳ್ಳು ಹೇಳುವ ಪ್ರಧಾನಿ ಸ್ವತಂತ್ರ ಭಾರತದಲ್ಲಿ ಹಿಂದೆಂದೂ ಇರಲಿಲ್ಲ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ