ಮನೆ ಕಾನೂನು ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅನುಪಾಲನಾ ವರದಿ ಸಲ್ಲಿಸಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶನ

ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣ: ಅನುಪಾಲನಾ ವರದಿ ಸಲ್ಲಿಸಲು ರಿಜಿಸ್ಟ್ರಿಗೆ ಹೈಕೋರ್ಟ್‌ ನಿರ್ದೇಶನ

0

ಶಾಸಕರು ಮತ್ತು ಸಂಸದರ ವಿರುದ್ಧದ ಬಾಕಿ ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನೀಡಿರುವ ನಿರ್ದೇಶನಗಳ ಅನ್ವಯ ಅನುಪಾಲನಾ ವರದಿ ಸಲ್ಲಿಸಲು ರಿಜಿಸ್ಟ್ರಿಗೆ ಬುಧವಾರ ಕರ್ನಾಟಕ ಹೈಕೋರ್ಟ್‌ ಆದೇಶಿಸಿದೆ.

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ಮೇಲ್ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ದಾಖಲಿಸಿಕೊಂಡಿರುವ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆಯ ವೇಳೆ ಅಮಿಕಸ್‌ ಕ್ಯೂರಿಯಾಗಿರುವ ಹಿರಿಯ ವಕೀಲ ಆದಿತ್ಯ ಸೋಂಧಿ ಅವರು “ಸುಪ್ರೀಂ ಕೋರ್ಟ್‌ 2023ರ ನವೆಂಬರ್‌ನಲ್ಲಿ ಕೆಲವು ನಿರ್ದೇಶನಗಳನ್ನು ನೀಡಿದ್ದು, ಇದನ್ನು ಉಲ್ಲೇಖಿಸಿ ನವೆಂಬರ್‌ 9ರಂದು ಮೆಮೊ ಸಲ್ಲಿಸಲಾಗಿದೆ” ಎಂದರು.

ಆಗ ಸಿಜೆ ಅವರು “ಸುಪ್ರೀಂ ಕೋರ್ಟ್‌ ಆದೇಶಕ್ಕೆ ಅನುಗುಣವಾಗಿ ನಾವು ಕ್ರಮಕೈಗೊಂಡಿದ್ದೇವೆ” ಎಂದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಸೋಂಧಿ ಅವರು “ಪ್ರಧಾನ ಸತ್ರ ನ್ಯಾಯಾಲಯದಲ್ಲಿ (ವಿಶೇಷ ನ್ಯಾಯಾಲಯ) ಶಾಸಕರು ಮತ್ತು ಸಂಸದರಿಗೆ ಸಂಬಂಧಿಸಿದ ಬಾಕಿ ಇರುವ ಪ್ರಕರಣಗಳನ್ನು ರಿಜಿಸ್ಟ್ರಿಯು ವಿಭಾಗೀಯ ಪೀಠದ ಮುಂದೆ ಮಂಡಿಸಲು ಸೂಚಿಸಬೇಕು. ಇದರಿಂದ ಆ ಪ್ರಕರಣಗಳಲ್ಲಿನ ಬೆಳವಣಿಗೆ ಪರಿಶೀಲಿಸಲು ಅನುಕೂಲವಾಗಲಿದೆ” ಎಂದರು.

ಮುಂದುವರಿದು, “2022ರ ಮಾರ್ಚ್‌ 5ರಂದು ಹೈಕೋರ್ಟ್‌ ಆದೇಶ ಮಾಡಿದ್ದು, ಹಲವು ಶಾಸಕರು/ ಸಂಸದರ ವಿರುದ್ಧದ ಪ್ರಕರಣಗಳನ್ನು ಹಿಂಪಡೆದಿರುವುದರ ಕುರಿತಾದ ಸ್ಥಿತಿಗತಿಯ ಬಗ್ಗೆ ಈ ನ್ಯಾಯಾಲಯದ ಪರಿಶೀಲನೆಯಾಗಬೇಕಿದೆ. ಈ ವಿಚಾರದಲ್ಲಿ ಸಾಕಷ್ಟು ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಬೇಕಿದೆ. ನ್ಯಾಯಾಲಯಕ್ಕೆ ಸಮಯಾವಕಾಶ ಆದಾಗ ಇದನ್ನು ಕೈಗೆತ್ತಿಕೊಳ್ಳಬಹುದು” ಎಂದರು.

ಇದನ್ನು ಆಲಿಸಿದ ಪೀಠವು “2023 ನವೆಂಬರ್‌ 9ರ ಸುಪ್ರೀಂ ಕೋರ್ಟ್‌ ನಿರ್ದೇಶನವನ್ನು ನವೆಂಬರ್‌ 20ರಂದು ಆದಿತ್ಯ ಸೋಂಧಿ ಅವರು ಮೆಮೊ ರೂಪದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಮಿಕಸ್‌ ಕೋರಿಕೆಯಂತೆ ರಿಜಿಸ್ಟ್ರಿಯು ಆದೇಶ ಅನುಪಾಲನೆ ಮಾಡಿದೆ. ಈ ಆದೇಶಕ್ಕೂ ಮುನ್ನ ಹೈಕೋರ್ಟ್‌ ಕೆಲವು ನಿರ್ದೇಶನಗಳನ್ನು ನೀಡಿದ್ದು, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ಅನುಪಾಲನಾ ವರದಿಯನ್ನು ರಿಜಿಸ್ಟ್ರಿ ಸಲ್ಲಿಸಬೇಕು” ಎಂದು ಆದೇಶಿಸಿ, ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಿತು.

ಹಿಂದಿನ ಲೇಖನಅಲ್ಪಸಂಖ್ಯಾತರ ವೋಟ್ ತಪ್ಪುವ ಆತಂಕದಿಂದ ರಾಮ ಮಂದಿರ ಲೋಕಾರ್ಪಣೆಯ ಆಹ್ವಾನ‌ ತಿರಸ್ಕರಿಸಿದ್ದಾರೆ: ಪ್ರಲ್ಹಾದ್ ಜೋಶಿ ತಿರುಗೇಟು
ಮುಂದಿನ ಲೇಖನಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸಾರ್ವಜನಿಕ ಜೀವನದಲ್ಲಿ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವರು: ಮುಖ್ಯಮಂತ್ರಿ ಸಿದ್ದರಾಮಯ್ಯ