ಮನೆ ಕಾನೂನು ಕಿರುಕುಳದಿಂದ ಪತ್ನಿ ದೂರವಾದರೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್

ಕಿರುಕುಳದಿಂದ ಪತ್ನಿ ದೂರವಾದರೆ ಜೀವನಾಂಶ ನಿರಾಕರಿಸುವಂತಿಲ್ಲ: ಹೈಕೋರ್ಟ್

0

ಕೌಟುಂಬಿಕ ಕಿರುಕುಳ ಹಿನ್ನೆಲೆಯಲ್ಲಿ ಪತ್ನಿ ಗಂಡನ ಮನೆ ತೊರೆದ ಸಂದರ್ಭದಲ್ಲಿ ಆಕೆಯು ಪರಸ್ಪರ ಒಪ್ಪಿಗೆ ಮೇರೆಗೆ ಪ್ರತ್ಯೇಕ ವಾಸವಿದ್ದಾಳೆ ಎಂದು ಪತಿಗೆ ವಾದಿಸಲು ಅವಕಾಶವಿಲ್ಲ ಎಂದಿರುವ ಹೈಕೋರ್ಟ್, ಇಂತಹ ಸಂದರ್ಭಗಳಲ್ಲಿ ಪತ್ನಿ ಜೀವನಾಂಶ ಪಡೆಯಲು ಅರ್ಹಳಿರುತ್ತಾಳೆ ಎಂದು ಸ್ಪಷ್ಟಪಡಿಸಿದೆ.

ಜೀವನಾಂಶ ಕೋರಿ ಪತ್ನಿ ಅಂಬಿಕಾ ದೊಡ್ಡಬಳ್ಳಾಪುರದ ಜೆಎಂಎಫ್’ಸಿ ಕೋರ್ಟ್’ನಲ್ಲಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಪತಿ ಸತೀಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಚಾರಣಾ ನ್ಯಾಯಾಲಯಕ್ಕೆ ಜೀವನಾಂಶ ಕೋರಿ ಪತ್ನಿ ಸಲ್ಲಿಸಿರುವ ಅರ್ಜಿಯಲ್ಲಿ ತನಗೆ ಪತಿ ಹಾಗೂ ಅತ್ತೆಯಿಂದ ಕಿರುಕುಳವಿತ್ತು. ತಾಯಿ ಸೂಚನೆ ಮೇರೆಗೆ ಪತಿ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಅವರ ಕಿರುಕುಳ ಸಹಿಸಲಾಗದೆ ಪತಿಯ ಮನೆಯನ್ನು ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪೀಠ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಇಂತಹ ಪರಿಸ್ಥಿತಿಯಲ್ಲಿ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿಯು ಪತಿಯ ಮನೆ ತೊರದಿದ್ದಾರೆ ಹಾಗೂ ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂಬ ಪತಿಯ ವಾದವನ್ನು ಒಪ್ಪಲಾಗದು. ಇಂತಹ ಸಂದರ್ಭದಲ್ಲಿ ಪತ್ನಿಯು ಜೀವನಾಂಶ ಕೇಳಲು ಅರ್ಹಳಿರುತ್ತಾಳೆ. ಜತೆಗೆ ಜೀವನಾಂಶ ನೀಡುವ ಬಾದ್ಯತೆಯನ್ನು ಪತಿ ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2016ರ ನವೆಂಬರ್ 1ರಂದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದ ದಂಪತಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತ್ತು. 2020ರ ಡಿಸೆಂಬರ್ 7ರಂದು ಪತ್ನಿ ಪತಿಯ ವಿರುದ್ಧ ಐಪಿಸಿ ಸೆಕ್ಷನ್ 498ಎ (ಕಿರುಕುಳ) ಹಾಗೂ 504 (ಶಾಂತಿಭಂಗ ಮಾಡಲು ಉದ್ರೇಕಿಸಲಿಕ್ಕಾಗಿ ಉದ್ದೇಶಪೂರ್ವಕ ಅವಮಾನ) ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಪತಿಯಿಂದ ಜೀವನಾಂಶ ಕೊಡಿಸುವಂತೆ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್ಸಿಗೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.

ಆ ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದ ಪತಿ ತನ್ನ ಪತ್ನಿ ಸ್ವ ಇಚ್ಛೆಯಿಂದ ಮನೆ ತೊರೆದಿದ್ದಾಳೆ. ಸಿಆರ್’ಪಿಸಿ ಸೆಕ್ಷನ್ 125(4)ರ ಪ್ರಕಾರ ದಂಪತಿ ಪರಸ್ಪರ ಒಪ್ಪಂದದ ಮೇರೆಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದರೆ, ಪತ್ನಿ ಗಂಡನಿಂದ ಜೀವನಾಂಶ ಪಡೆಯಲು ಅರ್ಹಳಾಗಿರುವುದಿಲ್ಲ. ಅದರಂತೆ ಪತ್ನಿಗೆ ಜೀವನಾಂಶ ಕೊಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

ಹಿಂದಿನ ಲೇಖನಗಡಿವಿವಾದ: ಡಿ.12 ರಂದು ರಾಜ್ಯ ಸಂಸದರ ನಿಯೋಗದಿಂದ ಕೇಂದ್ರ ಗೃಹ ಸಚಿವರ ಭೇಟಿ- ಸಿಎಂ ಬೊಮ್ಮಾಯಿ
ಮುಂದಿನ ಲೇಖನಬೈಕ್ ಡಿಕ್ಕಿಯಾಗಿ ಪಾದಾಚಾರಿ ಸಾವು