ಕಲಬುರಗಿ: ಪರಿಸರ ಸಂರಕ್ಷಣೆ ಕಾಯ್ದೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒಡೆತನದ ಚಿಂಚೋಳಿಯ ಸಿದ್ದಸಿರಿ ಸಕ್ಕರೆ ಕಾರ್ಖಾನೆ ಕೇಂದ್ರದ ಮಾಲಿನ್ಯ ನಿಯಂತ್ರಣ ಮಂಡಳಿಗೆ 1.50 ಕೋಟಿ ರೂ ದಂಡ ಕಟ್ಟಿರುವ ನಂತರೂ ಕ್ರಮ ಸುಧಾರಿಸದ ಹಿನ್ನೆಲೆಯಲ್ಲಿ ಇಲಾಖಾಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ದಂಡ ಕಟ್ಟಿದ ನಂತರವೂ ಉಲ್ಲಂಘನೆಯನ್ನು ಸರಿಪಡಿಸಿಕೊಂಡಿಲ್ಲ ಎಂದರೂ ಕ್ರಮ ಕೈಗೊಳ್ಳಬಾರದೆ ಎಂದು ಪ್ರಶ್ನಿಸಿದ ಸಚಿವರು, ವಾರದ ಹಿಂದೆ ಇಲಾಖಾ ಪ್ರಗತಿ ಪರಿಶೀಲನೆ ಸಭೆ ಸಂದರ್ಭದಲ್ಲಿ ಕಾನೂನು ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ದ ಕ್ರಮ ಕೈಗೊಳ್ಳಲು ಸೂಚಿಸಿದ್ದೆ. ಅದರಂತೆ ಬಂದ್ ಗೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯವರು ಈಗ ಕ್ರಮ ಕೈಗೊಂಡಿರಬಹುದು ಎಂದರು.
ವಾಯು – ಜಲ ಮಾಲಿನ್ಯ ಉಲ್ಲಂಘಿಸಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಇದಾಗಿದೆ. ಇದು ಯತ್ನಾಳ ಅವರ ಒಡೆತನದ ಒಂದು ಕಾರ್ಖಾನೆಗೆ ಮಾತ್ರವಲ್ಲ ವಾಯು, ಜಲ ಕಾಯ್ದೆ ಉಲ್ಲಂಘಿಸುವ ಎಲ್ಲಾ ಕಾರ್ಖಾನೆಗಳ ವಿರುದ್ಧ ಕ್ರಮಕ್ಕೆ ಸೂಚಿಸಿರುವೆ ಎಂದು ಖಂಡ್ರೆ ಸ್ಪಷ್ಟ ಪಡಿಸಿದರು.
ನೋಟಿಸ್ ನೀಡಿರುವುದು ರಾಜಕೀಯ ಪ್ರೇರಿತ ಎನ್ನುವ ಯತ್ನಾಳ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದರು.
ಯಾವುದೇ ರೀತಿಯ ಪರವಾನಗಿ ಪಡೆಯದೇ ಲಕ್ಷಾಂತರ ಟನ್ ಕಬ್ಬು ನುರಿಸಿದ್ದಾರೆ. ಕಾರ್ಖಾನೆ ಯಾರದು ಎಂದೂ ನನಗೆ ಆ ಸಂದರ್ಭದಲ್ಲಿ ಗೊತ್ತಿರಲಿಲ್ಲ. ಯತ್ನಾಳ ಅವರಿಗೆ ಯಾರು ಮಿಸ್ ಗೈಡ್ ಮಾಡಿದ್ದಾರೆಂದು ಗೊತ್ತಿಲ್ಲ. ಅವರ ಕಾರ್ಖಾನೆ ಅನುಮತಿ ಪಡೆಯದೆ ಕೆಲಸ ಶುರು ಮಾಡಲಾಗಿದೆ. ಈ ರೀತಿ ಇನ್ನಾವುದೇ ಕಾರ್ಖಾನೆಗಳಿದ್ದರೂ ಅವುಗಳ ವಿರುದ್ದ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವ ಖಂಡ್ರೆ ತಿಳಿಸಿದರು.
ನೋಟಿಸ್ ನೀಡಿದ ನಂತರವೂ ಕಾರ್ಖಾನೆ ಬಂದ್ ಮಾಡದಿದ್ದರೆ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ಹೂಡಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.