ನವದೆಹಲಿ(New Delhi): ಅಕ್ರಮ ಡಿ–ನೋಟಿಫೈ ಪ್ರಕರಣದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧದ ಕ್ರಿಮಿನಲ್ ವಿಚಾರಣೆಗೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆಯಾಜ್ಞೆ ನೀಡಿದೆ.
ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ನಡೆಯುತ್ತಿರುವ ಕ್ರಿಮಿನಲ್ ವಿಚಾರಣೆಯನ್ನು ರದ್ದುಗೊಳಿಸಬೇಕು ಎಂಬ ಯಡಿಯೂರಪ್ಪ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು.
2020ರ ಡಿಸೆಂಬರ್ 22ರಂದು ಹೈಕೋರ್ಟ್ ನೀಡಿದ್ದ ಆದೇಶದ ಸಿಂಧುತ್ವ ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.ಯಡಿಯೂರಪ್ಪ ಪರ ವಕೀಲ ಕೆ.ವಿ. ವಿಶ್ವನಾಥನ್ ವಾದ ಮಂಡಿಸಿದರು. ಇದನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರಿದ್ದ ನ್ಯಾಯಪೀಠ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ನೀಡಿದೆ.ಯಡಿಯೂರಪ್ಪ ವಿರುದ್ಧ ಲೋಕಾಯಕ್ತ ಪೊಲೀಸರು ನಡೆಸುತ್ತಿದ್ದ ತನಿಖೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತ್ತು.ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯಲ್ಲಿ ಸಡಿಲಿಕೆ ಮಾಡಲಾಗದು ಎಂದಿದ್ದ ಹೈಕೋರ್ಟ್, ಸಾರ್ವಜನಿಕ ಸೇವಕರು, ಸಂಸದರು ಹಾಗೂ ಶಾಸಕರು ಶಾಮೀಲಾಗಿದ್ದಾರೆ ಎನ್ನಲಾದ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಅಪರಾಧ ನ್ಯಾಯಾಲಯಗಳು ಆದೇಶಿಸಿರುವ ತನಿಖೆಯ ಮೇಲೆ ನಿಗಾ ಇರಿಸಿ ಎಂದು ಲೋಕಾಯುಕ್ತ ನ್ಯಾಯಾಲಯಕ್ಕೆ ನಿರ್ದೇಶಿಸಿತ್ತು.
ವಾಸುದೇವ ರೆಡ್ಡಿ ಎಂಬುವವರು ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುವಂತೆ 2015ರ ಫೆಬ್ರುವರಿ 18ರಂದು ಲೋಕಾಯುಕ್ತ ಪೊಲೀಸರಿಗೆ ಬೆಂಗಳೂರಿನ ಜಿಲ್ಲಾ ನ್ಯಾಯಾಲಯ ನಿರ್ದೇಶನ ನೀಡಿತ್ತು. ಇದರಂತೆ ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನು ಅನ್ನು ರದ್ದುಗೊಳಿಸಬೇಕು ಎಂದು ಯಡಿಯೂರಪ್ಪ 2015ರ ಫೆಬ್ರುವರಿ 21ರಂದೇ ಮನವಿ ಸಲ್ಲಿಸಿದ್ದರು.2006–07ರಲ್ಲಿ ಹಲವು ಎಕರೆ ಭೂಮಿಯನ್ನು ಅಕ್ರಮ ಡಿ–ನೋಟಿಫೈ ಮಾಡಿದ್ದಾರೆ ಎನ್ನಲಾದ ಪ್ರಕರಣ ಇದಾಗಿದೆ.