ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಕಚ್ಚಾ ಬಾಂಬ್ ಸ್ಫೋಟಗೊಂಡು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.
ಟಿಎಂಸಿ ಕಾರ್ಯಕರ್ತನ ಕೈಗಳನ್ನು ಕತ್ತರಿಸಿ, ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪಶ್ಚಿಮ ಬಂಗಾಳ ಗವರ್ನರ್ ಸಿವಿ ಆನಂದ್ ಬೋಸ್, ಕಳೆದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದ ಟಿಎಂಸಿ ಕಾರ್ಯಕರ್ತನ ಕುಟುಂಬವನ್ನು ಭೇಟಿ ಮಾಡಿದ್ದಾರೆ.
ಕಳೆದ ತಿಂಗಳು ಪಂಚಾಯತ್ ಚುನಾವಣಾ ದಿನಾಂಕ ಪ್ರಕಟವಾದ ಬಳಿಕ ಹಲವು ಘರ್ಷಣೆಗಳು ಸಂಭವಿಸಿವೆ, ಶನಿವಾರ ಬೋಸ್ ಕೂಚ್ ಜಿಲ್ಲೆಯ ಕೆಲವು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದರು.
ಬಿಜೆಪಿ ನಾಯಕನ ಶವ ಪತ್ತೆ ಪುರುಲಿಯಾ ಜಿಲ್ಲೆಯ ಬೋಡೋ ಪ್ರದೇಶದಲ್ಲಿ ಬಿಜೆಪಿ ನಾಯಕ ಬಂಕಿಮ್ ಹನ್ಸ್ದಾ ಅವರ ಮೃತದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಗೋಸಾಬಾದ ಚುನಾವಣಾ ಪ್ರಚಾರದ ವೇಳೆ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ 6 ಮಂದಿ ಗಾಯಗೊಂಡಿದ್ದಾರೆ. ಪಶ್ಚಿಮ ಮಿಡ್ನಾಪುರದ ದಾಂತನ್ ನಲ್ಲಿ ಬಿಜೆಪಿ ಅಭ್ಯರ್ಥಿಯನ್ನು ತೃಣಮೂಲ ಕಾರ್ಯಕರ್ತರು ಥಳಿಸಿದ್ದಾರೆ. 82,000 ಕ್ಕೂ ಹೆಚ್ಚು ಅರೆಸೇನಾಪಡೆ ಸಿಬ್ಬಂದಿಯನ್ನು 2013 ರ ಚುನಾವಣೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಚುನಾವಣಾ ಸಂಸ್ಥೆಗೆ ಹೈಕೋರ್ಟ್ ಕೇಳಿದೆ.