ಮನೆ ರಾಜಕೀಯ ಸೋಮವಾರದ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಹೆಚ್.ಡಿ.ಕುಮಾರಸ್ವಾಮಿ

ಸೋಮವಾರದ ನಂತರ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಹೆಚ್.ಡಿ.ಕುಮಾರಸ್ವಾಮಿ

0

ರಾಮನಗರ: ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಸೋಮವಾರದ ನಂತರ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

Join Our Whatsapp Group

ಬಿಡದಿ ಸಮೀಪದ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಶನಿವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು.

ಕಾಂಗ್ರೆಸ್ಸಿನವರು ನಮ್ಮ ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಈಗ ಅದು ಯೂ ಟರ್ನ್ ತೆಗೆದುಕೊಳ್ಳುತ್ತಿದೆ. ಕಾಂಗ್ರೆಸ್‌ ನಿಂದ 15ಕ್ಕೂ ಹೆಚ್ಚು ಸಮರ್ಥ ಅಭ್ಯರ್ಥಿಗಳು ಜೆಡಿಎಸ್‌ ನತ್ತ ಮುಖ ಮಾಡಿದ್ದು, ನಮ್ಮ ಅಭ್ಯರ್ಥಿಗಳ ಕೊರತೆಯೂ ನೀಗುತ್ತಿದೆ. 120ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವ ವಾತಾವರಣ ನಿರ್ಮಾಣ ಆಗುತ್ತಿದೆ. ರಾಷ್ಟ್ರೀಯ ಪಕ್ಷ ಇನ್ನೂ ಮೊದಲ ಪಟ್ಟಿಯನ್ನೇ ಬಿಡುಗಡೆ ಮಾಡಿಲ್ಲ  ಎಂದರು.

ಕೆಎಂಎಫ್‌ ಅನ್ನು ಹಂತಹಂತವಾಗಿ ಮುಗಿಸಲು ಹುನ್ನಾರ ನಡೆದಿದೆ. ಹಣದ ಆಸೆಯಾಗಿ ಕೆಎಂಎಫ್‌ ಅಧಿಕಾರಿಗಳೇ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಅಮುಲ್ ವಿಚಾರದಲ್ಲಿ ರಾಜ್ಯದ ಬಿಜೆಪಿ ನಾಯಕರು ಗುಜರಾತಿನವರನ್ನು ಓಲೈಸಲು ಹೊರಟಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಇದರ ಅರಿವು ಇದೆಯೋ ಇಲ್ಲವೋ ಗೊತ್ತಿಲ್ಲ. ರೈತರ ಬದುಕಿನಲ್ಲಿ ಚೆಲ್ಲಾಟ ಆಡಬಾರದು ಎಂದು ಎಚ್ಚರಿಸಿದರು.

ಜೆಡಿಎಸ್ ಪ್ರಚಾರ ವಾಹನಗಳಿಗೆ ಇದೇ 8ರವರೆಗೆ ಪ್ರಚಾರಕ್ಕೆ ಅನುಮತಿ ಪಡೆದಿದ್ದೇವೆ. ಆದಾಗ್ಯೂ ಅಧಿಕಾರಿಗಳು ಶನಿವಾರ ಯಶವಂತಪುರದಲ್ಲಿ ನಮ್ಮ ವಾಹನಗಳನ್ನು ತಡೆದಿದ್ದಾರೆ. ಈ ಅಧಿಕಾರಿಗಳಿಗೆ ಕಾನೂನು ಗೊತ್ತಿದೆಯೋ ಇಲ್ಲ ಸೋಮಶೇಖರ್ ಬಳಿ ತರಬೇತಿ ಪಡೆದಿದ್ದಾರೋ ಗೊತ್ತಿಲ್ಲ. ಕೊಂಚ ಎಚ್ಚರಿಕೆಯಿಂದ ವರ್ತಿಸಿ. ನೀತಿಸಂಹಿತೆ ಪ್ರಕಾರ ನಡೆದುಕೊಳ್ಳಿ. ದಬ್ಬಾಳಿಕೆ ತೋರಿದರೆ ಮುಂದೆ ನನ್ನ ಕೈಗೆ ಸಿಗದೇ ಎಲ್ಲಿಗೆ ಹೋಗುತ್ತೀರಿ ಎಂದು ಎಚ್ಚರಿಸಿದರು.

ಬಾರಿ ಚನ್ನಪಟ್ಟಣ ಕ್ಷೇತ್ರದಿಂದ ಮಾತ್ರ ನನ್ನ ಸ್ಪರ್ಧೆ. ಕಾರ್ಯಕರ್ತರ ಒತ್ತಡ ಇರುವ ಕ್ಷೇತ್ರಗಳಲ್ಲೂ ಬೇರೆ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರು ಹುಲಿ ವಿಹಾರಕ್ಕಾಗಿ ಬರುತ್ತಿದ್ದಾರೆಯೇ ಹೊರತು ರಾಜ್ಯದ ಜನರ ಕಷ್ಟ ಕೇಳಲು ಬರುತ್ತಿಲ್ಲ. ದೇಶದ ಅಭಿವೃದ್ಧಿ ಮಾಡಿ ಸುಸ್ತಾಗಿದ್ದಾರೆ. ಹೀಗಾಗಿ ವಿಶ್ರಾಂತಿಗಾಗಿ ರಾಜ್ಯಕ್ಕೆ ಬರುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಹಿಂದಿನ ಲೇಖನನಟ ಕೋಮಲ್‌ ಅಭಿನಯದ ‘ಉಂಡೆನಾಮ’ ಸಿನಿಮಾದ ಟ್ರೈಲರ್‌ ಬಿಡುಗಡೆ
ಮುಂದಿನ ಲೇಖನಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮನೀಷ್‌ ಪಾಂಡೆ ನೂತನ ದಾಖಲೆ