ನವದೆಹಲಿ: ಇಂದು ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ 15 ದಿನ 5000 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚನೆ ನೀಡಲಾಗಿದೆ.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕರ್ನಾಟಕದ ಅಧಿಕಾರಿಗಳು, ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿರುವುದು ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ತಮಿಳುನಾಡಿಗೆ ನೀರು ಹರಿಸುವಂತೆ ಸಿಡಬ್ಲ್ಯುಆರ್ಸಿ ಆದೇಶ ಹೊರಡಿಸುತ್ತಿದ್ದಂತೆ ಮಂಡ್ಯದಲ್ಲಿ ನಡೆಯುತ್ತಿದ್ದ ರೈತರ ಪ್ರತಿಭಟನೆಯ ಕಾವು ಹೆಚ್ಚಾಗತೊಡಗಿದೆ. ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ರಾಜ್ಯ ರೈತ ಸಂಘದಿಂದ ಪ್ರತಿಭಟನೆ ಮುಂದುವರಿದಿದ್ದು, ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕುತ್ತಿದ್ದಾರೆ. CWRC ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತಿದ್ದಾರೆ.
ಕಾವೇರಿ ನೀರಿನ ವಿಚಾರವಾಗಿ ಪ್ರಧಾನಮಂತ್ರಿಗಳ ಕಚೇರಿಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲು ಪತ್ರ ಬರೆಯುತ್ತಲೇ ಇದ್ದೇವೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮುಂದಿನ ವಾರ ಅವಕಾಶ ಸಿಗಬಹುದೆಂದು ನಂಬಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮ ಬಳಿ ಕೇವಲ ಕುಡಿಯಲು ಮತ್ತು ನಮ್ಮ ರೈತರ ಬೆಳೆಗಳಿಗೆ ಸಾಕಾಗುವಷ್ಟು ಮಾತ್ರ ನೀರಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದು ಸ್ಪಷ್ಟವಾಗಿ ಕಾವೇರಿ ಪ್ರಾಧಿಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದು ಹೇಳಿದರು.
ತಮಿಳುನಾಡಿಗೆ ನೀರು ಹರಿಸದಂತೆ ಕಟೀಲ್ ಆಗ್ರಹ
ತಮಿಳುನಾಡಿಗೆ ನೀರು ಹರಿಸದಂತೆ ಸರ್ಕಾರ, ಸಿಎಂ ಸಿದ್ದರಾಮಯ್ಯ ಅವರಿಗೆ ಆಗ್ರಹಿಸುತ್ತೇವೆ ಎಂದು ಬೆಂಗಳೂರಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಹೇಳಿದ್ದಾರೆ. ನಮ್ಮ ರಾಜ್ಯದ ರೈತರ ಬೆಳೆಗೆ ನೀರಿಲ್ಲ, ಬೆಂಗಳೂರಿಗೆ ಕುಡಿಯಲು ನೀರಿಲ್ಲ. ಇಂತಹ ಸ್ಥಿತಿಯಲ್ಲಿ ಯಾವುದೇ ಕಾರಣಕ್ಕೂ ಸರ್ಕಾರ ನೀರು ಬಿಡಬಾರದು. ಸುಪ್ರೀಂಕೋರ್ಟ್ ನಲ್ಲಿ ಸರ್ಕಾರ ಸಮರ್ಥವಾಗಿ ವಾದ ಮುಂದುವರಿಸಲಿ. ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಜತೆಗೆ ಇರುತ್ತೇವೆ ಎಂದರು.