ಮನೆ ರಾಜ್ಯ ದಕ್ಷಿಣ ಕನ್ನಡ: 18 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ

ದಕ್ಷಿಣ ಕನ್ನಡ: 18 ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕಟ್ಟೆಚ್ಚರ

0

ಮಂಗಳೂರು: ಲೋಕಸಭೆ ಚುನಾವಣೆಯ ಕರ್ನಾಟಕದ ಮೊದಲ ಹಂತದ ಮತದಾನ ಏಪ್ರಿಲ್​ 26 ರಂದು ನಡೆಯಲಿದೆ. ಹೀಗಾಗಿ ಪೊಲೀಸ್​ ಇಲಾಖೆ 18 ನಕ್ಸಲ್ ಪೀಡಿತ ಪ್ರದೇಶವನ್ನ ಗುರುತಿಸಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ ಹೇಳಿದರು.

Join Our Whatsapp Group

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮತ್ತು ಪೊಲೀಸ್ ಕಮೀಷನರ್ ಅನುಪಮ್ ಅಗರ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ, ಎಸ್​ ಪಿ ರಿಷ್ಯಂತ್ ಸಿ.ಬಿ ನಕ್ಸಲ್ ಪೀಡಿತ ಪ್ರದೇಶದ ಮತಗಟ್ಟೆಗಳಿಗೆ ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆಯೊಂದಿಗೆ ನಕ್ಸಲ್ ನಿಗ್ರಹ ಪಡೆ ಕಣ್ಗಾವಲಿಗೆ ಇರಲಿದೆ. ನಕ್ಸಲ್ ನಿಗ್ರಹ ಪಡೆ ಈಗಾಗಲೆ ಕಾಡಿನಲ್ಲಿ ಕೂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದೆ. ಮತದಾರರು ಯಾವುದೇ ಆತಂಕ ಇಲ್ಲದೆ, ಅನುಮಾನ ಇಲ್ಲದೆ ಮತದಾನ ಮಾಡಿ ಎಂದು ಹೇಳಿದರು.

ಏನೇ ಸಮಸ್ಯೆ ಆದರೂ ನಮಗೆ ತಿಳಿಸಿ. ನೈತಿಕ ಪೊಲೀಸ್ ಗಿರಿ ನಡೆಸುವುದು, ಅಡ್ಡಗಟ್ಟುವುದು ಮಾಡಿದರೆ ಸಹಿಸಲ್ಲ. ಅಂತವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. 1600 ಪೊಲೀಸ್ ಸಿಬ್ಬಂದಿಗಳನ್ನು ಮತಗಟ್ಟೆಯಲ್ಲಿ ನಿಯೋಜನೆ ಮಾಡಲಾಗಿದೆ. ಸಿ.ಎ.ಪಿಎಫ್, ಕೆ.ಎಸ್.ಆರ್.ಪಿ, 560 ಹೋಮ್ ಗಾರ್ಡ್, ಎ.ಎನ್.ಎಫ್, ಫಾರೆಸ್ಟ್ ಗಾರ್ಡ್ಸ್ ಭದ್ರತೆಗೆ ಇರುತ್ತಾರೆ ಎಂದು ತಿಳಿಸಿದರು.

ಇಂದು (ಏ.24) ಸಂಜೆ 6 ಗಂಟೆ ಬಳಿಕ ಕ್ಷೇತ್ರದ ಮತದಾರರಲ್ಲದ ರಾಜಕೀಯ ಪಕ್ಷಗಳ ಮುಖಂಡರು ಕ್ಷೇತ್ರದಲ್ಲಿ ಇರಬಾರದು. ಸಂಜೆ 6 ಗಂಟೆಗೆಯಿಂದ ಬಹಿರಂಗ ಪ್ರಚಾರ ಮುಕ್ತಾಯವಾಗುತ್ತದೆ. ಆ ಬಳಿಕ ರ್ಯಾಲಿ, ಬೀದಿ ಬೀದಿ ಪ್ರಚಾರಗಳು ಮಾಡುವಂತಿಲ್ಲ. ಮನೆ ಮನೆಗೆ ಹೋಗಿ ಪ್ರಚಾರ ಮಾಡುವ ಅವಕಾಶ ಬಿಟ್ಟು ಬೇರೆ ಯಾವುದೇ ಅವಕಾಶ ಇಲ್ಲ. ಸಂಜೆ 6 ಗಂಟೆಯಿಂದ ಎಪ್ರಿಲ್ 26ರವರೆಗೆ ಮದ್ಯ ಮಾರಾಟ ನಿಷೇಧಿಸಿದ್ದೇವೆ. ಕೇರಳದಲ್ಲಿಯೂ ಅದೇ ದಿನ ಚುನಾವಣೆ ಇರುವುದರಿಂದ ಅಲ್ಲಿಯೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಖಾಸಗಿ ಕಾರ್ಯಕ್ರಮದ ನೆಪದಲ್ಲಿ ರಾಜಕೀಯ ಕಾರ್ಯಕ್ರಮ ಮಾಡಿದರೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದರು.

ಭದ್ರತೆ ದೃಷ್ಟಿಯಿಂದ ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ 1157 ರೌಡಿ ಆಸಾಮಿಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ. 75 ಜನ ರೌಡಿಗಳನ್ನು ಗಡಿಪಾರು ಮಾಡಲಾಗಿದೆ. 806 ರೌಡಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಷರತ್ತು ಉಲ್ಲಂಘನೆ ಮಾಡಿದರೆ ಅಂತವರ ಬಾಂಡ್ ಹಣ ಮುಟ್ಟುಗೋಲು ಹಾಕುತ್ತೇವೆ. 8 ಜನ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಹಾಕಲಾಗಿದೆ. ಈ ಹಿಂದಿನ ಚುನಾವಣೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರ ಮೇಲೂ ಕ್ರಮ ಆಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಹೇಳಿದರು.